21 ಎಕರೆ ಅರಣ್ಯದಲ್ಲಿ ಗಣಿಗಾರಿಕೆ ಎನ್‌ಒಸಿ ಕೊಟ್ಟಿದ್ದ ಡಿಸಿಎಫ್ ಸಸ್ಪೆಂಡ್
ಹಾಸನ:ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಿರಾಕ್ಷೇಪಣಾ ಪತ್ರ ನೀಡಿದ ಹಾಸನ ಪ್ರಾದೇಶೀಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಹರೀಶ್ ಅವರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕು ಶ್ರವಣಬೆಳಗೊಳ ಹೋಬಳಿ ದಡಿಘಟ್ಟ ಗ್ರಾಮದ ಅರಣ್ಯ ಭೂಮಿಯಲ್ಲಿ ಗಣಿಗಾರಿಕೆಗೆ ಎನ್‌ಒಸಿ ನೀಡಿದ ಹಿನ್ನೆಲೆಯಲ್ಲಿ ಡಿಸಿಎಫ್‌ರನ್ನು ಅಮಾನತು ಮಾಡಿ ಅರಣ್ಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಗೀತಾ ಎಂ.ಪಾಟೀಲ್ ಆದೇಶ ಹೊರಡಿಸಿದ್ದಾರೆ.
ದಡಿಘಟ್ಟ ಗ್ರಾಮದ ಸರ್ವೆ ನಂ. 224 ರಲ್ಲಿ 50.30 ಹೆಕ್ಟೇರ್ ಗೋಮಾಳವನ್ನು ಪರಿಭಾವಿತ ಅರಣ್ಯ ಎಂದು 2014 ರಲ್ಲಯೇ ಅನುಮೋದನೆ ಮಾಡಲಾಯಿತ್ತು. ಆದರೆ, ಈ ಪೈಕಿ 21 ಎಕರೆ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಮಾರ್ಚ್ 31ರಂದು ನಿರಾಕ್ಷೇಪಣಾ ಪತ್ರವನ್ನು ನೀಡುವ ಮೂಲಕ ಅರಣ್ಯ ಕಾಯ್ದೆ 1980 ಹಾಗೂ ಸರ್ವೋಚ್ಚ ನ್ಯಾಯಲಯದ ಆದೇಶವನ್ನು ಉಲ್ಲಂಘಿಸಲಾಯಿತ್ತು. ಹೀಗಾಗಿ ಹಾಸನ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ. ಹರೀಶ್ ಸೇವೆಯಿಂದ ಅಮಾನತುಗೊಂಡಿದ್ದಾರೆ.
ಪ್ರಕರಣದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚಿಸಿದ್ದರು. ಹೀಗಾಗಿ ಅರಣ್ಯ ಇಲಾಖೆ ಮಧ್ಯಂತರ ತನಿಖಾ ವರದಿ ಪಡೆದು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯನ್ನು ಅಮಾನತು ಮಾಡಿದೆ.