” ಶೇ.75ಕ್ಕೂ ಹೆಚ್ಚು ಹೈಕೋರ್ಟ್ ನ್ಯಾಯಾಧೀಶರು ಮೇಲ್ಜಾತಿಯವರು: ಕಾನೂನು ಸಚಿವ ಅರ್ಜುನ್ ಮೇಘ್ವಾಲ್.
ಹೊಸದಿಲ್ಲಿ: ದೇಶದಲ್ಲಿ 2018ರಿಂದ ಜುಲೈ 17, 2023ರ ತನಕ ನೇಮಕ ಮಾಡಲಾದ 604 ಹೈಕೋರ್ಟ್ ನ್ಯಾಯಾಧೀಶರುಗಳ ಪೈಕಿ 458 ಮಂದಿ ಶೇ. 75.68 ಸಾಮಾನ್ಯ ವರ್ಗದವರಾಗಿದ್ದಾರೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘ್ವಾಲ್ ಲೋಕಸಭೆಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾರೆ. ಎಐಎಂಐಎಂ ಮುಖ್ಯಸ್ಥ ಮತ್ತು ಸಂಸದ ಅಸದುದ್ದೀನ್ ಉವೈಸಿ ಕೇಳಿದ ಪ್ರಶ್ನೆಗೆ ಈ ಉತ್ತರ ದೊರಕಿದೆ.
ಕಾನೂನು ಸಚಿವರು ನೀಡಿದ ಉತ್ತರ ಪರಿಗಣಿಸಿದರೆ 2018 ರಿಂದ ಈಚೆಗೆ ನೇಮಕಗೊಂಡ ಪ್ರತಿ ನಾಲ್ಕು ನ್ಯಾಯಾಧೀಶರಲ್ಲಿ ಮೂವರು ಮೇಲ್ಜಾತಿಯವರಾಗಿದ್ದಾರೆ.
ಕಾನೂನು ಸಚಿವಾಲಯ ನೀಡಿದ ಮಾಹಿತಿಯಂತೆ 2018 ರಿಂದ ಈಚೆಗೆ ಪರಿಶಿಷ್ಟ ಜಾತಿಗೆ ಸೇರಿದ 18 ನ್ಯಾಯಾಧೀಶರು, ಪರಿಶಿಷ್ಟ ವರ್ಗಗಳಿಗೆ ಸೇರಿದ 9 ಮಂದಿ, ಒಬಿಸಿ ವಿಭಾಗದ 72 ಮಂದಿ, ಅಲ್ಪಸಂಖ್ಯಾತ ವಿಭಾಗದ 34 ಮಂದಿಯನ್ನು ನೇಮಿಸಲಾಗಿದೆ ಹಾಗೂ ಉಳಿದ 13 ನ್ಯಾಯಾಧೀಶರು ಯಾವ ವರ್ಗದವರು ಎಂಬ ಕುರಿತು ಮಾಹಿತಿಯಿಲ್ಲ ಎಂದು ಸಚಿವಾಲಯ ಹೇಳಿದೆ.
ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಿಗೆ ಸಂವಿಧಾನದ 124, 217 ಮತ್ತು 224ನೇ ವಿಧಿಯನ್ವಯ ನೇಮಕಾತಿ ಮಾಡಲಾಗುವುದರಿಂದ ಯಾವುದೇ ಜಾತಿ ಯಾವುದೇ ವರ್ಗದವರಿಗೆ ಮೀಸಲಾತಿ ಇರುವುದಿಲ್ಲ ಎಂದೂ ಸಚಿವಾಲಯ ಹೇಳಿದೆ.
ಆದರೆ ನ್ಯಾಯಾಧೀಶರುಗಳ ನೇಮಕಾತಿಗಾಗಿ ಪ್ರಸ್ತಾವನೆ ಗಳನ್ನು ಸಲ್ಲಿಸುವಾಗ ಪರಿಶಿಷ್ಟ ಜಾತಿ, ಪಂಗಡ, ಇತರ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರನ್ನೂ ಪರಿಗಣಿಸಬೇಕೆಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಸರಕಾರ ಮನವಿ ಮಾಡುತ್ತಲೇ ಇದೆ. ಅಷ್ಟೇ ಅಲ್ಲದೆ ಸುಪ್ರೀಂ ಕೋರ್ಟ್ ಕೊಲೀಜಿಯಂ ಶಿಫಾರಸು ಮಾಡಿದ ಹೆಸರುಗಳನ್ನಷ್ಟೇ ಸರಕಾರ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ನ್ಯಾಯಾಧೀಶರುಗಳ ಹುದ್ದೆಗಳಿಗೆ ನೇಮಿಸುತ್ತದೆ ಎಂದು ತನ್ನ ಉತ್ತರದಲ್ಲಿ ಕಾನೂನು ಸಚಿವಾಲಯ ಹೇಳಿದೆ.
ಎಲ್ಲಾ ಹೈಕೋರ್ಟ್‌ಗಳಿಗೆ ಕಳೆದ ಐದು ವರ್ಷಗಳಲ್ಲಿ ನೇಮಕಾತಿಗೊಂಡ ನ್ಯಾಯಾಧೀಶರುಗಳ ಪೈಕಿ ಶೇ 79ರಷ್ಟು ಮಂದಿ ಮೇಲ್ಜಾತಿಗಳಿಗೆ ಸೇರಿದವರೇ ಹಾಗೂ 2018 ರಿಂದ ಈಚೆಗೆ ನೇಮಕಗೊಂಡ 537 ನ್ಯಾಯಾಧೀಶರುಗಳ ಪೈಕಿ ಕೇವಲ ಶೇ 2.6 ಮಂದಿ ಮಾತ್ರ ಮೇಲ್ವರ್ಗ ಹೊರತು ಪಡಿಸಿ ಇತರ ವರ್ಗದವರೇ ಎಂಬ ಪ್ರಶ್ನೆಯನ್ನು ಓವೈಸಿ ಕೇಳಿದ್ದರು.