”5 ದಿನಗಳ ಸಂಸತ್ ಅಧಿವೇಶನ: ಮೂರು ಮಸೂದೆ ಮಂಡಿಸಲು ಕೇಂದ್ರ ತಯಾರಿ!
ನವದೆಹಲಿ: ಕೇಂದ್ರ ಸರ್ಕಾರವು ಸೆಪ್ಟೆಂಬರ್ 18 ರಿಂದ 22ರ ವರೆಗೆ ಸಂಸತ್ ವಿಶೇಷ ಅಧಿವೇಶನ ನಡೆಸಲು ನಿರ್ಧರಿಸಿದೆ. ಈ ಅವಧಿಯಲ್ಲಿ ಬಿಜೆಪಿ ಕೆಲವು ಮಸೂದೆಗಳ ಮಂಡಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ‘ಒಂದು ರಾಷ್ಟ್ರ, ಒಂದು ಚುನಾವಣೆ’, ಏಕರೂಪ ನಾಗರಿಕ ಸಂಹಿತೆ ಮತ್ತು ಮಹಿಳಾ ಮೀಸಲಾತಿ ಕುರಿತು ಮಸೂದೆಗಳನ್ನು ಮಂಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಗುರುವಾರ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅಧಿವೇಶನ ಕುರಿತು ಮಾಹಿತಿ ನೀಡಿದ್ದಾರೆ. ಸೆಪ್ಟೆಂಬರ್ 18 ರಿಂದ 22ರ ವರೆಗೆ 5 ದಿನಗಳ ಅಧಿವೇಶನ ಕರೆಯಲಾಗುತ್ತಿದೆ ಎಂದಿದ್ದಾರೆ. ‘ಒಂದು ರಾಷ್ಟ್ರ, ಒಂದು ಚುನಾವಣೆ’ ಎನ್ನುವುದು ಲೋಕಸಭೆ ಚುನಾವಣೆ ಮತ್ತು ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಕಲ್ಪನೆಯನ್ನು ಸೂಚಿಸುತ್ತದೆ. ಈ ಕಲ್ಪನೆಯನ್ನು ಈ ಹಿಂದೆ ಹಲವಾರು ಬಾರಿ ಪ್ರಸ್ತಾಪಿಸಲಾಗಿದೆ ಮತ್ತು ಭಾರತದ ಕಾನೂನು ಆಯೋಗವು ಈ ಕುರಿತಂತೆ ಅಧ್ಯಯನ ನಡೆಸಿದೆ.
ಒಂದು ದೇಶ ಒಂದು ಚುನಾವಣೆಯೂ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯೂ ಒಂದೇ ವರ್ಷ ಒಂದೇ ದಿನ ಎರಡು ಮತ ಎಂಬ ಆಧಾರದಲ್ಲಿ ನಡೆಯಲಿದೆ. ಇದು ಹಣ, ಸಮಯ, ಮಾನವ ಶಕ್ತಿ ಉಳಿಸಲು ಪ್ರಮುಖ ಹೆಜ್ಜೆ ಇಟ್ಟಂತಾಗಲಿದೆ ಎಂಬುದು ಕೇಂದ್ರದ ವಾದವಾಗಿದೆ.
ಸದ್ಯ ಆಯಾ ರಾಜ್ಯಗಳಿಗೆ ಸಂಬಂಧ ಪಟ್ಟಂತೆ ವಿಧಾನಸಭಾ ಚುನಾವಣೆಗಳು ಅವಧಿ ಅಂತ್ಯಗೊಂಡ ಬಳಿಕ ನಡೆಯುತ್ತಿವೆ. ಆದರೆ ಇವುಗಳನ್ನು ಲೋಕಸಭೆ ಚುನಾವಣೆಯೊಂದಿಗೆ ನಡೆಸುವುದು ಬಿಜೆಪಿಯ ಇಂಗಿತವಾಗಿದೆ.