”ಬಟ್ಟೆ ಬಿಚ್ಚಿ ದೇವಾಲಯಕ್ಕೆ ಬನ್ನಿ ಎನ್ನುವುದು ದೇವರ ದೃಷ್ಟಿಯಲ್ಲಿ ಅಮಾನವೀಯ: ಸಿಎಂ ಸಿದ್ದರಾಮಯ್ಯ.
ಬೆಂಗಳೂರು: ಬಟ್ಟೆ ಬಿಚ್ಚಿ ದೇವಾಲಯಕ್ಕೆ ಬನ್ನಿ ಎನ್ನುವುದು ದೇವರ ದೃಷ್ಟಿಯಲ್ಲಿ ಅಮಾನವೀಯ. ದೇವರ ದೃಷ್ಟಿಯಲ್ಲಿ ಎಲ್ಲರೂ ಒಂದೆ. ದೇವರನ್ನು ಮುಂದಿಟ್ಟುಕೊಂಡು ತಾರತಮ್ಯ ಆಚರಿಸುವುದು ದೇವರಿಗೆ ಮಾಡುವ ಅವಮಾನ. ದೇವರನ್ನೇ ಮುಂದಿಟ್ಟುಕೊಂಡು ಜಾತಿ, ಧರ್ಮ ಸಂಘರ್ಷ ಸೃಷ್ಟಿಸುವ ವಿಕೃತಿಯನ್ನು ಈಗಲೂ ಆಚರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ಆಯೋಜಿಸಿದ್ದ ನಾರಾಯಣ ಗುರು ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಮೊದಲ ಬಾರಿ ಮುಖ್ಯಮಂತ್ರಿ ಆದಾಗ ನಾರಾಯಣಗುರು ಜಯಂತಿಯನ್ನು ಸರ್ಕಾರದಿಂದಲೇ ಆಚರಿಸುವ ಆದೇಶ ಹೊರಡಿಸಿದ್ದೆ. ನಾರಾಯಣಗುರು ಒಂದು ಜಾತಿ-ಒಂದು ಧರ್ಮಕ್ಕೆ ಸಿಕ್ಕಿಕೊಳ್ಳದೆ ವಿಶ್ವ ಮಾನವರಾದವರು. ಜಾತಿ, ಧರ್ಮಗಳ ನಡುವೆ ಸಂಘರ್ಷ ಸೃಷ್ಟಿಸುವ ಶಕ್ತಿಗಳು ನಾರಾಯಣ ಗುರುಗಳ ಅವಧಿ ಯಲ್ಲೂ ಇದ್ದವು. ಈಗಲೂ ಇವೆ. ನಾರಾಯಣ ಗುರುಗಳು ಸಂಘರ್ಷಕ್ಕೆ ಕಾರಣ ಆಗದಂತೆ ಸಮಾಜದಲ್ಲಿ ವ್ಯಾಪಕ ಬದಲಾವಣೆ ತಂದರು ಎಂದು ಬಣ್ಣಿಸಿದರು.
ಸಮಾಜದ ತಾರತಮ್ಯಗಳಿಗೆ ನಾರಾಯಣ ಗುರುಗಳು ಭಿನ್ನವಾದ ಆಚರಣೆ ಕಂಡುಕೊಂಡರು. ನಿಮಗೆ ಪ್ರವೇಶ ವಿಲ್ಲದ ದೇವಸ್ಥಾನಗಳಿಗೆ ಹೋಗಲೇಬೇಡಿ. ನೀವೇ ನಿಮ್ಮ ದೇವರುಗಳಿಗೆ ದೇವಸ್ಥಾನ ಕಟ್ಟಿ ಪೂಜೆ ಮಾಡಿ ಎಂದರು. ಈ ಸಮಾಜ ಸುಧಾರಣೆಯ ಕ್ರಾಂತಿಕಾರಕ ಧಾರ್ಮಿಕ ಚಳವಳಿ ಪರಿಣಾಮವಾಗಿ ಕೇರಳದಲ್ಲಿ 60 ದೇವಸ್ಥಾನ ಗಳನ್ನು ನಿರ್ಮಿಸಿದರು. ಉಳಿದ ದೇವಸ್ಥಾನಗಳಿಗೆ ಪ್ರವೇಶ ಇಲ್ಲದ ಶೂದ್ರ ಮತ್ತು ದಲಿತ ಸಮುದಾಯವನ್ನು ತಾವೇ ಕಟ್ಟಿಸಿದ ದೇವಸ್ಥಾನಗಳಿಗೆ ಪ್ರವೇಶಿಸುವಂತೆ ಕ್ರಾಂತಿ ಮಾಡಿದರು ಎಂದು ಹಲವು ನಿದರ್ಶನಗಳನ್ನು ಉದಾಹರಿಸಿದರು.
ಈಡಿಗ ಅಭಿವೃದ್ಧಿ ನಿಗಮ, ಭವನಕ್ಕೆ ಅನುದಾನ
ಆರ್ಯ ಈಡಿಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಮತ್ತು ನಾರಾಯಣಗುರು ಭವನ ನಿರ್ಮಿಸಬೇಕು ಎನ್ನುವ ಸಮುದಾಯದ ಬೇಡಿಕೆಗೆ ಒಪ್ಪಿದ ಮುಖ್ಯಮಂತ್ರಿಗಳು ವೇದಿಕೆಯಲ್ಲೇ ಎರಡು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.
ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ವಿಖ್ಯಾತಾನಂದ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಸಚಿವ ಮಧು ಬಂಗಾರಪ್ಪ, ಶಾಸಕರಾದ ಗೋಪಾಲಕೃಷ್ಣ ಬೇಳೂರು, ಹೆಚ್.ಆರ್.ಗವಿಯಪ್ಪ, ಆರ್ಯ ಈಡಿಗ ಸಮಾಜದ ಅಧ್ಯಕ್ಷ ಡಾ.ಎಂ.ತಿಮ್ಮೇಗೌಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.