“ನಿಲ್ಲದ ಅತಿಕ್ರಮಣ ಸಮಸ್ಯೆ 153 ಎಕರೆ ಗಾಯರಾಣ ಜಮೀನು ಮಾಯ: ಗ್ರಾಮಸ್ಥರ ಹೋರಾಟಕ್ಕೆ ಬೆಲೆ ಕೊಡದ ಅಧಿಕಾರಿಗಳು
ಬೆಳಗಾವಿ: ಜಿಲ್ಲೆಯ ಮುಗಳಖೋಡ ಪಟ್ಟಣದಲ್ಲಿ
ಧಾರ್ಮಿಕ, ಪ್ರವಾಸೋದ್ಯಮ ಹಾಗೂ ಆರ್ಥಿಕವಾಗಿ ಮುಗಳಖೋಡ ಸುಧಾರಣೆಯತ್ತ ಸಾಗಿದೆ. ಆದರೆ, ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಅಪಾರ ಪ್ರಮಾಣದ ಭೂಮಿ ಅತಿಕ್ರಮಣ ಮಾಡಿಕೊಂಡಿದ್ದು, ಅಭಿವೃದ್ಧಿಗೆ ಅಡ್ಡಗಾಲು ಹಾಕಿದೆ.
ಮುಗಳಖೋಡ ಪಟ್ಟಣದ ಸುತ್ತಮುತ್ತ ಇರುವ ಒಟ್ಟು 11 ಸರ್ವೆ ಸಂಖ್ಯೆಗಳಲ್ಲಿ 153 ಎಕರೆಯಷ್ಟು ಗಾಯರಾಣ ಜಮೀನು ಇದೆ. ಇದರಲ್ಲಿ ಬಹುಪಾಲು ಪ್ರದೇಶವನ್ನು ಪ್ರಭಾವಿಗಳು ಅತಿಕ್ರಮಣ ಮಾಡಿಕೊಂಡಿದ್ದಾರೆ. ಕೆಲವರು ಬಂಗಲೆಗಳನ್ನು ಕಟ್ಟಿಕೊಂಡಿದ್ದರೆ ಮತ್ತೆ ಕೆಲವರು ಕೃಷಿಗಾಗಿ ಬಳಸುತ್ತಿದ್ದಾರೆ. ಸುಮಾರು 30 ವರ್ಷಗಳಿಂದಲೂ ಇಲ್ಲಿ ಸರ್ಕಾರಿ ಜಮೀನು ಇದ್ದೂ ಇಲ್ಲದಂತಾಗಿದೆ. ಸ್ಥಳೀಯ ಜನರಿಗೆ ದಕ್ಕಬೇಕಾದ ನಿವೇಶನ ಪ್ರದೇಶವನ್ನು ಇನ್ಯಾರೋ ಕಬಳಿಸಿದ್ದಾರೆ ಎಂಬ ಕೂಗು ನಿರಂತರ ಕೇಳಿಬರುತ್ತಿದೆ. ಆದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಕಣ್ಣೆತ್ತಿ ನೋಡಿಲ್ಲ.
ಈ ವಿಷಯವಾಗಿ ಹಲವು ಬಾರಿ ಇಲ್ಲಿನ ಕೆಲ ಪ್ರಮುಖರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ ಧರಣಿ ಕೂಡ ನಡೆಸಿದ್ದಾರೆ. ನೂರಾರು ರೈತರು ಪಾದಯಾತ್ರೆಯ ಮೂಲಕ ಸರ್ಕಾರವನ್ನು ಎಚ್ಚರಿಸಲು ತೆರಳಿದ ವೇಳೆ, ಅಂದಿನ ತಹಶೀಲ್ದಾರ್, ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಗುರ್ಲಾಪುರ ಕ್ರಾಸ್ ಬಳಿ ತಡೆದಿದ್ದರು. ಒಂದು ತಿಂಗಳ ಒಳಗಾಗಿ ಸರ್ವೆ ಮಾಡಿಸಿ ಹದ್ದುಬಸ್ತು ಹಾಕಿ ಕೊಡುವುದಾಗಿ ಲಿಖಿತವಾಗಿ ಬರೆದುಕೊಟ್ಟಿದ್ದರು. ಇದರಿಂದ ಪಾದಯಾತ್ರೆಯನ್ನು ಅರ್ಧಕ್ಕೆ ಮೋಟಕುಗೊಳಿಸಲಾಯಿತು. ಆದರೆ ಅದು ಇಲ್ಲಿಯವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಸಂಬಂಧಪಟ್ಟ ತಾಲ್ಲೂಕು ಕಂದಾಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ’ ಎಂದು ರೈತ ಹೋರಾಟಗಾರ ಸುರೇಶ ಹೊಸಪೇಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಅಲ್ಲಿಂದ ಇಲ್ಲಿಯವರೆಗೂ ಸರ್ಕಾರಿ ದಾಖಲಾತಿಯಲ್ಲಿ ಮಾತ್ರ ಗಾಯರಾಣಾ ಜಮೀಣು ಇದೆ. ಅತಿಕ್ರಮಣ ಮಾಡಿಕೊಂಡವರು ಈಗಾಗಲೇ ಕಟ್ಟಡ ಕಟ್ಟಿಕೊಂಡು ವಾಸವಾಸಿದ್ದಾರೆ. ಮತ್ತೆ ಕೆಲವರು ಬಾಡಿಗೆ ನೀಡಿದ್ದಾರೆ. ಇಷ್ಟೆಲ್ಲ ರಾಜ ರೋಷವಾಗಿ ನಡೆದಿದ್ದರೂ ಅಧಿಕಾರಿಗಳು ತಡೆಯುವ ಗೋಜಿಗೆ ಹೋಗಿಲ್ಲ’ ಎನ್ನುವುದು ಅವರ ಆರೋಪ.
‘ರಾಯಬಾಗ ತಹಶೀಲ್ದಾರರು ಕಂದಾಯ ಇಲಾಖೆಗೆ ಒಳಪಡುವ ಸರ್ಕಾರಿ ಗಾಯರಾಣವನ್ನು ಸರ್ವೆ ಮಾಡಿಸಿ ಹದ್ದುಬಸ್ತು ಮಾಡಿದರೆ ಮಾತ್ರ ಜಮೀನು ಉಳಿಯಬಹುದು. ಈಗಲಾದರೂ ಮೇಲಧಿಕಾರಿಗಳು ಪಟ್ಟಣದತ್ತ ಗಮನ ಕೊಡಬೇಕು. ಇಲ್ಲದಿದ್ದರೆ ತಹಶೀಲ್ದಾರ್ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದು ಸುರೇಶ ಹೊಸಪೇಟಿ ರವರು ಪ್ರತಿಕ್ರಿಯಿಸಿದ್ದಾರೆ.