ಸವದತ್ತಿ: ಯಲ್ಲಮ್ಮನ ಗುಡ್ಡದ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಬುಧವಾರ ಪೂರ್ಣ
ಬೆಳಗಾವಿ: ದೇವಸ್ಥಾನದಲ್ಲಿ ಮೇ 17ರಿಂದ ಜೂನ್ 30ರ ಅವಧಿಯಲ್ಲಿ(45 ದಿನ) ಭಕ್ತರು ಹಾಕಿದ ₹1,30,42,472 ನಗದು, ₹4.44 ಲಕ್ಷ ಮೌಲ್ಯದ ಚಿನ್ನಾಭರಣ, ₹2.29 ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳು ಸೇರಿದಂತೆ ₹1.37 ಕೋಟಿ ಕಾಣಿಕೆ ಸಂಗ್ರಹವಾಗಿದೆ.
ದೇಶದ ನಾನಾ ರಾಜ್ಯಗಳಿಂದ ಯಲ್ಲಮ್ಮನ ಗುಡ್ಡಕ್ಕೆ ಆಗಮಿಸುವ ಲಕ್ಷಾಂತರ ಭಕ್ತರು, ತಮ್ಮ ಇಷ್ಟರ್ಥ ಈಡೇರಿಸಿದ ಯಲ್ಲಮ್ಮ ದೇವಿಗೆ ಕಾಣಿಕೆ ರೂಪದಲ್ಲಿ ನಗದು, ಚಿನ್ನ, ಬೆಳ್ಳಿ ಆಭರಣ ನೀಡುತ್ತಾರೆ. ಅದರಲ್ಲೂ ‘ಶಕ್ತಿ’ ಯೋಜನೆಯಡಿ ಸರ್ಕಾರ ಮಹಿಳೆಯರಿಗೆ ಉಚಿತ ಸಾರಿಗೆ ಸೌಕರ್ಯ ಕಲ್ಪಿಸಿದ ನಂತರ ಗುಡ್ಡಕ್ಕೆ ಆಗಮಿಸುವ ಮಹಿಳೆಯರ ಸಂಖ್ಯೆ ಹೆಚ್ಚಿದ್ದು, ದೇವಸ್ಥಾನದ ಆದಾಯವೂ ವೃದ್ಧಿಯಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯಲ್ಲಮ್ಮ ದೇವಿ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್‍ಪಿಬಿ ಮಹೇಶ, ‘ಜೂನ್‍ನಲ್ಲಿ ಯಲ್ಲಮ್ಮ ದೇವಸ್ಥಾನಕ್ಕೆ ಬಂದ ಭಕ್ತರು ₹1.37 ಕೋಟಿ ಮೌಲ್ಯದ ಕಾಣಿಕೆ ಅರ್ಪಿಸಿದ್ದಾರೆ. ‘ಶಕ್ತಿ’ ಯೋಜನೆಯಿಂದಾಗಿಯೂ ಕಾಣಿಕೆ ಪ್ರಮಾಣ ಹೆಚ್ಚಿದೆ. ಈ ಮೊತ್ತವನ್ನು ರಿಂಗ್ ರಸ್ತೆ, ತಂಗುದಾಣ ನಿರ್ಮಾಣ ಸೇರಿದಂತೆ ಭಕ್ತರಿಗೆ ಮೂಲಸೌಕರ್ಯ ಒದಗಿಸಲು ಬಳಸಲಾಗುವುದು ಎಂದು ಹೇಳಿದರು.
ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ವೈ.ವೈ.ಕಾಳಪ್ಪನವರ, ಅಭಿಯಂತರ ಎ.ವಿ.ಮೂಳ್ಳೂರ, ಮುಜರಾಯಿ ಇಲಾಖೆ ಸಹಾಯಕ ಆಯುಕ್ತ ಬಸವರಾಜ ಜಿರಗ್ಯಾಳ, ಅಧೀಕ್ಷಕ ಸಂತೋಷ ಶಿರಸಂಗಿ, ಪರಿವೀಕ್ಷಕ ಶೀತಲ್ ಕಡಟ್ಟಿ, ಎಂ.ಎಸ್.ಯಲಿಗಾರ, ಎಂ.ಪಿ.ದ್ಯಾಮನಗೌಡ್ರ, ಅಲ್ಲಮಪ್ರಭು ಪ್ರಭುನವರ, ಪ್ರಕಾಶ ಪ್ರಭುನವರ, ಆರ್.ಎಚ್.ಸವದತ್ತಿ, ರಾಜು ಬೆಳವಡಿ, ವಿ.ಪಿ.ಸೊನ್ನದ, ಪ್ರಭು ಹಂಜಗಿ, ಎಂ.ಎಂ.ಮಾಹುತ ಇದ್ದರು.