ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರು:ದಾಂಡೇಲಿ ರೆಸ್ಟೋರೆಂಟ್ ನತ್ತ
ಧಾರವಾಡ: ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಜೂನ್ 20ರಂದು ಚುನಾವಣೆ ನಡೆಯಲಿದ್ದು, ಈ ನಡುವೆ ತಮ್ಮ ಸದಸ್ಯರಿಗೆ ಕಾಂಗ್ರೆಸ್ ಮುಖಂಡರು ಆಮಿಷವೊಡ್ಡುತ್ತಿದ್ದಾರೆ ಎನ್ನುವ ಆತಂಕದ ಹಿನ್ನೆಲೆಯಲ್ಲಿ ಬಿಜೆಪಿಯ ಕೆಲ ಸದಸ್ಯರು ದಾಂಡೇಲಿಯ ರೆಸ್ಟೋರೆಂಟ್ ಗೆ ತೆರಳಿದ್ದಾರೆ.
ಶುಕ್ರವಾರ ಸಂಜೆ ಎರಡು ಟೆಂಪೊ ಟ್ರಾವೆಲರ್ ವಾಹನಗಳಲ್ಲಿ ಮಹಾನಗರ ಪಾಲಿಕೆ ಸದಸ್ಯರು ರೆಸ್ಟೋರೆಂಟ್ ಗೆ ತೆರಳಿದ್ದಾರೆ. ಕೆಲವರು ತಮ್ಮ ಕುಟುಂಬದ ಸದಸ್ಯರನ್ನೂ ಕರೆದೊಯ್ದಿದ್ದಾರೆ. ನಿಖರವಾಗಿ ಎಷ್ಟು ಸದಸ್ಯರನ್ನು ಕರೆದುಕೊಂಡು ಹೋಗಿರುವ ಮಾಹಿತಿ ಬಹಿರಂಗ ಆಗಿಲ್ಲ. ರಾಜ್ಯ ಸರ್ಕಾರ ರಚಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಪಾಲಿಕೆಯ ಅಧಿಕಾರದ ಚುಕಾನೆಯನ್ನು ಹಿಡಿಯಲು ಪ್ರಯತ್ನಿಸುತ್ತಿದ್ದು, ತಮ್ಮ ಪಕ್ಷದ ಸದಸ್ಯರಿಗೆ ₹ 50 ಲಕ್ಷದ ಆಮಿಷವೊಡ್ಡಿದ್ದಾರೆ ಎಂದು ಬಿಜೆಪಿ ಮುಖಂಡರು ಇತ್ತೀಚೆಗಷ್ಟೆ ಆರೋಪಿಸಿದ್ದಾರೆ.
ಪಾಲಿಕೆಯ ಸದಸ್ಯರು ರೆಸ್ಟೋರೆಂಟ್ ತೆರಳಿದ್ದಾರೆ ಎನ್ನಲಾಗಿದೆ, ಸದಸ್ಯರು ದೂರವಾಣಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಹಾಗೂ ತಮ್ಮ ಮೊಬೈಲ್‌ಗಳನ್ನು ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆ.
‘ಸದಸ್ಯರನ್ನು ರೆಸ್ಟೋರೆಂಟ್ ಗೆ
ಕರೆದುಕೊಂಡು ಹೋಗಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಮೇಯರ್– ಉಪ ಮೇಯರ್ ಆಯ್ಕೆಗೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಜೂನ್ 19ರಂದು ಸಭೆ ಕರೆದಿರುವೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿ ಪಕ್ಷದ ಪ್ರಮುಖ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳುವರು. ಆಕಾಂಕ್ಷಿಗಳ ಜೊತೆ ಚರ್ಚಿಸಿ, ಮೇಯರ್– ಉಪಮೇಯರ್‌ಗೆ ಆಯ್ಕೆ ಮಾಡಲಾಗುವುದು’ ಎಂದು ಬಿಜೆಪಿ ಮಹಾನಗರ ಘಟಕದ ಅಧ್ಯಕ್ಷ ಸಂಜಯ ಕಪಟಕರ ಅವರು ತಿಳಿಸಿದರು.
ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. 82 ಸದಸ್ಯ ಬಲದ ಪಾಲಿಕೆಯಲ್ಲಿ 39 ಬಿಜೆಪಿ, 33 ಕಾಂಗ್ರೆಸ್, 3 ಎಐಎಂಐಎಂ, 6 ಜನ ಪಕ್ಷೇತರ ಮತ್ತು ಒಬ್ಬರು ಜೆಡಿಎಸ್ ಸದಸ್ಯರಿದ್ದಾರೆ. ಪಕ್ಷೇತರರಲ್ಲಿ ಮೂವರು ಈಗಾಗಲೇ ಬಿಜೆಪಿಗೆ ಬೆಂಬಲ ನೀಡಿದ್ದು, ಪಕ್ಷದ ಬಲ 42 ಇದೆ. ಹಿಂದಿನ ಅವಧಿಯಲ್ಲಿ ಎರಡೂ ಸ್ಥಾನಗಳನ್ನು ಬಿಜೆಪಿ ಸದಸ್ಯರೇ ಹೊಂದಿದ್ದರು. 33 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್, ಒಬ್ಬ ಜೆಡಿಎಸ್, ಮೂವರು ಎಐಎಂಐಎಂ ಸದಸ್ಯರ ಜೊತೆ 5 ಜನ ಪಕ್ಷೇತರರ ಬೆಂಬಲ ಪಡೆದು ಪಾಲಿಕೆಯನ್ನು ತನ್ನ ಅದಿನಕ್ಕೆ ತೆಗೆದುಕೊಳ್ಳಲು ತೀವ್ರ ಕಸರತ್ತು ನಡೆಸುತ್ತಿದೆ.
ಶೆಟ್ಟರ್ ಪ್ರಭಾವ:
ಪಾಲಿಕೆಯ ಅಧಿಕಾರದ ಗದ್ದುಗೆ ಹಿಡಿಯುವ ಟಾಸ್ಕ್ ಅನ್ನು ಶೆಟ್ಟರ್ ಅವರಿಗೆ ಕಾಂಗ್ರೆಸ್‌ನ ರಾಜ್ಯ ನಾಯಕರು ವಹಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅಲ್ಲದೇ, ಶೆಟ್ಟರ್ ಅವರ ಕೆಲ ಬೆಂಬಲಿಗರು ಕಾಂಗ್ರೆಸ್ ಕಡೆ ಬರಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಬಿಜೆಪಿಯ ನಾಯಕರು ಪಕ್ಷದ ಸದಸ್ಯರನ್ನು ರೆಸ್ಟೋರೆಂಟ್ ಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗುತ್ತಿದೆ.