ಭಾರತ ನ್ಯಾಯ ಯಾತ್ರೆಗೆ ಸಜ್ಜಾದ ಕಾಂಗ್ರೆಸ್ !!
ನವದೆಹಲಿ: ಕಾಂಗ್ರೆಸ್ ಪಕ್ಷವು ಮಣಿಪುರದಿಂದ ಮಹಾರಾಷ್ಟ್ರದವರೆಗೆ ‘ಭಾರತ ನ್ಯಾಯ ಯಾತ್ರೆ’ ಆರಂಭಿಸಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಬುಧವಾರ ಪ್ರಕಟಿಸಿದ್ದಾರೆ.
‘ರಾಹುಲ್ ಗಾಂಧಿಯವರು ಪೂರ್ವದಿಂದ ಪಶ್ಚಿಮಕ್ಕೆ ಯಾತ್ರೆ ಆರಂಭಿಸಬೇಕು ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಭಿಪ್ರಾಯಪಟ್ಟಿದೆ. ಅದರಂತೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯು (ಎಐಸಿಸಿ) ಜನವರಿ 14ರಿಂದ ಮಾರ್ಚ್ 20ರವರೆಗೆ ಮಣಿಪುರದಿಂದ ಮುಂಬೈವರೆಗೆ ‘ಭಾರತ ನ್ಯಾಯ ಯಾತ್ರೆ’ ನಡೆಸಲು ತೀರ್ಮಾನಿಸಿದೆ’ ಎಂದು ಅವರು ತಿಳಿಸಿದ್ದಾರೆ.
‘ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೊ ಯಾತ್ರೆಯು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 4,500 ಕಿ.ಮೀ ಕ್ರಮಿಸಿತ್ತು. ಅದು ಭಾರತದ ರಾಜಕೀಯದ ಮಟ್ಟಿಗೆ ಐತಿಹಾಸಿಕವಾದದ್ದು. ರಾಹುಲ್ ಅವರು ಹಿಂದಿನ ಯಾತ್ರೆಯಿಂದ ಪಡೆದ ಅನುಭವದೊಂದಿಗೆ ಭಾರತ ನ್ಯಾಯ ಯಾತ್ರೆಯನ್ನು ಮುನ್ನಡೆಸಲಿದ್ದಾರೆ. ಯಾತ್ರೆಯ ವೇಳೆ ದೇಶದ ಮಹಿಳೆಯರು, ಯುವಕರು ಹಾಗೂ ಅತ್ಯಂತ ಹಿಂದುಳಿದ ಸಮುದಾಯದವರೊಂದಿಗೆ ಸಂವಾದ ನಡೆಸಲಿದ್ದಾರೆ’ ಎಂದೂ ಹೇಳಿದ್ದಾರೆ.
ಮಣಿಪುರದಿಂದ ಆರಂಭವಾಗುವ ಈ ಯಾತ್ರೆಯು 14 ರಾಜ್ಯಗಳ ಒಟ್ಟು 85 ಜಿಲ್ಲೆಗಳಲ್ಲಿ 6,200 ಕಿ.ಮೀ. ಕ್ರಮಿಸಲಿದೆ. ಮಹಾರಾಷ್ಟ್ರ ತಲುಪುವ ಮುನ್ನ ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಛತ್ತೀಸಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್‌ನಲ್ಲಿ ಸಾಗಲಿದೆ. ಯಾತ್ರೆಯ ಬಹುಭಾಗ ಬಸ್‌ನಲ್ಲೇ ಸಾಗಲಿದ್ದು, ಆಯ್ದ ಸ್ಥಳಗಳಲ್ಲಿ ಪಾದಯಾತ್ರೆ ನಡೆಯಲಿದೆ.