ಬಿಜೆಪಿ ಹೆಣದ ಮೇಲೆ ಹಣ ಮಾಡಿದೆಯೇ?: ಸಚಿವ ಪ್ರಿಯಾಂಕ್ ಖರ್ಗೆ
ಹುಬ್ಬಳ್ಳಿ: ಕೋವಿಡ್ ಸಂದರ್ಭದಲ್ಲಿ ₹40 ಸಾವಿರ ಕೋಟಿ ಅವ್ಯವಹಾರವಾಗಿದೆ ಎಂದಾದರೆ, ಮನುಷ್ಯತ್ವವಿಲ್ಲದ ಬಿಜೆಪಿ ಹೆಣದ ಮೇಲೆ ಹಣ ಮಾಡಿದೆಯೇ? ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕರು ಸ್ಪಷ್ಟೀಕರಣ ನೀಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಹೆಸರಿನಲ್ಲಿ ₹40ಸಾವಿರ ಕೋಟಿ ಅವ್ಯವಹಾರ ನಡೆದಿದೆ’ ಎನ್ನುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆಗೆ ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ಯತ್ನಾಳ ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಪದೇಪದೇ ಬಿಜೆಪಿ ನಾಯಕರಿಗೆ ಸವಾಲು ಹಾಕುತ್ತಿದ್ದಾರೆ. ತನ್ನ ಮೇಲೆ ಕ್ರಮ ಕೈಗೊಂಡರೆ ದಾಖಲೆ ಬಿಡುಗಡೆ ಮಾಡುವ ಎಚ್ಚರಿಕೆ ಸಹ ನೀಡಿದ್ದಾರೆ. ನಾಡಿನ ಜನತೆಯ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ, ದಾಖಲೆಗಳನ್ನು ಬಹಿರಂಗಪಡಿಸಬೇಕು. ಅಥವಾ, ತನಿಖೆ ನಡೆಸುತ್ತಿರುವ ಆಯೋಗಕ್ಕೆ ದಾಖಲೆ ನೀಡಬೇಕು ಎಂದು ವಿನಂತಿಸಿದರು.
ಕೋವಿಡ್ ಉಪಕರಣ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂದು ನಾವು ಸಾರ್ವಜನಿಕ ಲೆಕ್ಕ ಪರಿಶೋಧನ ಸಮಿತಿಯಲ್ಲಿ ಪ್ರಶ್ನೆ ಮಾಡುತ್ತೇವೆ ಎಂದಾಗ, ಅಂದಿನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಡೆದಿದ್ದರು. ಸದನ ಸಮಿತಿ ವರದಿಯಲ್ಲಿ ಏನೇ ತನಿಖೆ ನಡೆದರೂ, ಅದನ್ನು ಮುಂದುವರಿಸಬಾರದು, ಕಾನೂನು ಬಾಹಿರವಾಗುತ್ತದೆ ಎಂದು ಪತ್ರ ಸಮಿತಿಗೆ ಬರೆದಿದ್ದರು. ಯಾವತ್ತಾದರೂ ಸಾರ್ವಜನಿಕ ಲೆಕ್ಕ ಪರಿಶೋಧನಾ ಸಮಿತಿಗೆ ಸ್ಪೀಕರ್ ಪತ್ರ ಬರೆದ ಉದಾಹರಣೆ ಇದೆಯೇ? ಅಲ್ಲದೆ, ಕೋವಿಡ್ ಭ್ರಷ್ಟಾಚಾರದ ಕುರಿತು ಕೇಂದ್ರದ ಬಿಜೆಪಿ ನಾಯಕರು ಮಾತನಾಡುತ್ತಿಲ್ಲ ಎಂದರೆ, ಅವರಿಗೂ ಪಾಲು ಹೋಗಿರಬಹುದು ಎಂದು ಸಂಶಯ ವ್ಯಕ್ತಪಡಿಸಿದರು.