ಜಿಪಂ & ತಾಪಂ ಚುನಾವಣೆ ನಡೆಸುವ ಹಾದಿ ಸುಗಮ !
ಬೆಂಗಳೂರು: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರ ಮರು ವಿಂಗಡಣೆ, ಪ್ರವರ್ಗವಾರು ಮೀಸಲಾತಿ ಅಂತಿಮಗೊಂಡಿದ್ದು, ಈ ಸಂಬಂಧ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ಶಿಫಾರಸ್ಸನ್ನು ಸರ್ಕಾರ ಅಂಗೀಕರಿಸಿದೆ.
ಕೊಡಗು ಹೊರತುಪಡಿಸಿ 30 ಜಿಲ್ಲಾ ಪಂಚಾಯಿತಿಗಳಿಗೆ ಒಟ್ಟು 1,101 ಸದಸ್ಯರು, 234 ತಾಲೂಕು ಪಂಚಾಯಿತಿಗಳಿಗೆ 3621 ಸದಸ್ಯರ ಸಂಖ್ಯೆಯನ್ನು ನಿರ್ಧರಿಸಿ ಅಧಿಸೂಚನೆ ಹೊರಡಿಸಲಾಗಿದೆ. ಇದರೊಂದಿಗೆ ಜಿಪಂ ಮತ್ತು ತಾಪಂ ಚುನಾವಣೆ ನಡೆಸುವ ಹಾದಿ ಭಾಗಶಃ ಸುಗಮವಾಗಿದೆ.
ಸದಸ್ಯರ ಸಂಖ್ಯೆ ಜೊತೆಗೆ ಶೇಕಡ 33 ರಷ್ಟು ಪ್ರವರ್ಗವಾರು ಹಾಗೂ ಶೇಕಡ 50ರಷ್ಟು ಮಹಿಳಾ ಮೀಸಲಾತಿ ನಿಗದಿಪಡಿಸಲಾಗಿದೆ. ಈ ಸಂಬಂಧ ಡಿಸೆಂಬರ್ 16ರಂದು ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಕ್ಷೇತ್ರವಾರು ಮೀಸಲು ನಿಗದಿ ಪ್ರಕ್ರಿಯೆ ಇನ್ನೂ ಬಾಕಿ ಇದೆ. ನಂತರ ಆಕ್ಷೇಪಣೆ ಆಹ್ವಾನಿಸಿ ಅಂತಿಮಗೊಳಿಸಲಾಗುವುದು. ಈ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸಲಾಗುವುದು ಎಂದು ಹೇಳಲಾಗಿದೆ.