ಮಂತ್ರ ಮಾಂಗಲ್ಯದ ಮೂಲಕ ನಾಳೆ ನ. 29 ಕ್ಕೆ ನಟಿ ಪೂಜಾ ಗಾಂಧಿ ಮದುವೆ
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಮುಂಗಾರು ಮಳೆ’ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ ನಟಿ ಪೂಜಾ ಗಾಂಧಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
“ನ.29 ರಂದು ಸಂಜೆ ಮಂತ್ರ ಮಾಂಗಲ್ಯದ ಮೂಲಕ ವಿಜಯ್ ಘೋರ್ಪಡೆ ಅವರನ್ನು ಮದುವೆಯಾಗುತ್ತಿದ್ದೇನೆ. ನಮ್ಮನ್ನು ಹರಸಿ, ಆಶೀರ್ವದಿಸಿ’ ಎಂದು ಕನ್ನಡದಲ್ಲಿ ಖುದ್ದಾಗಿ ಆಮಂತ್ರಣ ಪತ್ರವನ್ನು ಪೂಜಾ ಗಾಂಧಿ ಬರೆದಿದ್ದಾರೆ.
ಬಾಲಿವುಡ್, ಕಾಲಿವುಡ್‌ನಲ್ಲಿ ನಟಿಸಿದ್ದ ಪೂಜಾ ಅವರ ಸಿನಿ ಬದುಕಿಗೆ ತಿರುವು ನೀಡಿದ್ದ ಸಿನಿಮಾ, ಯೋಗರಾಜ್ ಭಟ್ ನಿರ್ದೇಶನದ ‘ಮುಂಗಾರು ಮಳೆ’. ಈ ಸಿನಿಮಾ ಬಳಿಕ ‘ಮಿಲನ’, ‘ಕೃಷ್ಣ’ ಹೀಗೆ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ಪೂಜಾ ನಟಿಸಿದರು. ಜೊತೆಗೆ ತಮಿಳು ಸಿನಿಮಾಗಳಲ್ಲೂ ಕಾಣಿಸಿಕೊಂಡರು. ‘ದಂಡುಪಾಳ್ಯ’, ‘ಅಭಿನೇತ್ರಿ’ ಸಿನಿಮಾಗಳ ಬಳಿಕ ಸಣ್ಣ ಬ್ರೇಕ್ ತೆಗೆದುಕೊಂಡಿದ್ದರು. 2020ರ ಆರಂಭದಲ್ಲಿ ಪಿತ್ತಕೋಶದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಈ ಅವಧಿಯಲ್ಲಿ ನಟನೆಯಿಂದ ದೂರವೇ ಉಳಿದಿದ್ದರು. ಇತ್ತೀಚೆಗೆ ‘ಸಂಹಾರಿಣಿ’ ಎಂಬ ಚಿತ್ರದಲ್ಲಿ ಪೂಜಾ ಕಾಣಿಸಿಕೊಂಡಿದ್ದರು.