ಮಹಾತ್ಮ ಗಾಂಧಿ ‘ಮಹಾಪುರುಷ’, ನರೇಂದ್ರ ಮೋದಿ ‘ಯುಗಪುರುಷ’: ಉಪರಾಷ್ಟ್ರಪತಿ ಜಗದೀಪ್ ಧನ್ಕರ್
ನವದೆಹಲಿ: ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆಗೆ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.
ಜೈನ ಧರ್ಮಗುರು ಹಾಗೂ ತತ್ವಜ್ಞಾನಿ ಶ್ರೀಮದ್ ರಾಜಚಂದ್ರಜೀ ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉಪ ರಾಷ್ಟ್ರಪತಿಗಳು ನಾನು ನಿಮಗೊಂದು ವಿಚಾರ ಹೇಳಲು ಬಯಸುತ್ತೇನೆ ಎಂದು ಹೇಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಹಾತ್ಮಾ ಗಾಂಧೀಜಿಗೆ ಹೋಲಿಸಿದ್ದಾರೆ. ‘ಮಹಾತ್ಮಾ ಗಾಂಧೀಜಿ ಅವರು ಕಳೆದ ಶತಮಾನದ ‘ಮಹಾಪುರುಷ’ ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಈ ಶತಮಾನದ ‘ಯುಗಪುರುಷ’ ಎಂದು ಬಣ್ಣಿಸಿದ್ದಾರೆ.
“ಮಹಾತ್ಮ ಗಾಂಧಿಯವರು ಸತ್ಯಾಗ್ರಹ ಮತ್ತು ಅಹಿಂಸೆಯ ಮೂಲಕ ನಮ್ಮನ್ನು ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಗೊಳಿಸಿದರು. ಅದರಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಾವು ಯಾವಾಗಲೂ ಸ್ವತಂತ್ರವಾಗಿ ಇರಬೇಕೆಂದು ಬಯಸಿದ ಹಾದಿಗೆ ನಮ್ಮನ್ನು ಕೊಂಡೊಯ್ದಿದ್ದಾರೆ ಎಂದು ಧಂಖರ್ ಹೇಳಿದ್ದಾರೆ.
ಆದರೆ ಉಪರಾಷ್ಟ್ರಪತಿಗಳ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕರು ಸೇರಿದಂತೆ ಹಲವು ನಾಯಕರು ಉಪರಾಷ್ಟ್ರಪತಿಗಳ ಹೇಳಿಕೆಗೆ ಖಾರವಾಗಿ ತಿರುಗೇಟು ನೀಡಿದ್ದಾರೆ. ಧನ್ಕರ್ ಅವರ ಹೇಳಿಕೆ ನಾಚಿಕೆಗೇಡು ಎಂದು ಕಾಂಗ್ರೆಸ್ ಸಂಸದ ಕಿಡಿಕಾರಿದ್ದಾರೆ.