ಬೆಳಗಾವಿ ಜಿಲ್ಲೆಯಲ್ಲಿ 361 ಬಾಲೆಯರು ಗರ್ಭಿಣಿಯಾಗಿದ್ದಾರೆ !?
ಬೆಳಗಾವಿ: ಜಿಲ್ಲೆಯಲ್ಲಿ ಅಕ್ಷರ ಕಲಿಯಬೇಕಾದ ವಯಸ್ಸಿನಲ್ಲೇ ಹಸೆಮಣೆ ಏರುತ್ತಿರುವ ಬಾಲೆಯರು 18ರ ಪ್ರಾಯ ತುಂಬುವ ಮುನ್ನವೇ, ಗರ್ಭಿಣಿಯರಾಗುತ್ತಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ಕಳೆದ 19 ತಿಂಗಳಲ್ಲಿ 361 ಬಾಲಕಿಯರು ಗರ್ಭ ಧರಿಸಿದ ಸಂಗತಿ ಆರ್‌ಸಿಎಚ್ (ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ) ಪೋರ್ಟಲ್‌ನ ಅಂಕಿ–ಅಂಶಗಳಿಂದ ದೃಢಪಟ್ಟಿದೆ.
ಮಹಾರಾಷ್ಟ್ರ ಮತ್ತು ಗೋವಾದೊಂದಿಗೆ ಗಡಿ ಹಂಚಿಕೊಂಡ ಜಿಲ್ಲೆಯಲ್ಲಿ ನಿರಾತಂಕವಾಗಿ ನಡೆಯುತ್ತಿರುವ ಬಾಲ್ಯವಿವಾಹದಿಂದ ಬಾಲಕಿಯರು ಹದಿಹರೆಯದಲ್ಲೇ ಗರ್ಭ ಧರಿಸುತ್ತಿದ್ದಾರೆ. ಆದರೆ, ಅಪರಾಧಿಗಳಿಗೆ ಶಿಕ್ಷೆಯಾಗದ್ದರಿಂದ ಇಂಥ ಪ್ರಕರಣ ಹೆಚ್ಚುತ್ತ ಸಾಗಿವೆ.
ಜಿಲ್ಲೆಯಲ್ಲಿ 2022–23ರಲ್ಲಿ 81,817 ಮಹಿಳೆಯರು ಗರ್ಭ ಧರಿಸಿದ್ದಾರೆ. ಈ ಪೈಕಿ 208 ಬಾಲಕಿಯರು 18 ವರ್ಷಕ್ಕೂ ಮೊದಲೇ ಗರ್ಭಿಣಿಯರಾಗಿದ್ದಾರೆ. 2023ರ ಏಪ್ರಿಲ್ 1ರಿಂದ ಅಕ್ಟೋಬರ್ 31ರ ಅವಧಿಯಲ್ಲಿ 51,468 ಮಹಿಳೆಯರು ಗರ್ಭಿಣಿಯರಾಗಿದ್ದು, ಈ ಪೈಕಿ 153 ಬಾಲೆಯರಿದ್ದಾರೆ. ಕಳೆದ ವರ್ಷ 393 ಗರ್ಭಿಣಿಯರಲ್ಲಿ ಒಬ್ಬ ಬಾಲಕಿ ಇದ್ದರೆ, ಈ ವರ್ಷ 336 ಗರ್ಭಿಣಿಯರಲ್ಲಿ ಒಬ್ಬ ಬಾಲೆ ಗರ್ಭಿಣಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ನಿರ್ಲಕ್ಷ್ಯವೇ ಕಾರಣ:
‘ಶಿಕ್ಷಣ ಪಡೆಯಬೇಕಾದ ಹಂತದಲ್ಲಿ ಬಾಲಕಿಯರು ಗರ್ಭಿಣಿಯರಾಗಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಇದನ್ನು ತಡೆಯಬೇಕಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ‘ಕಾಟಾಚಾರ’ಕ್ಕೆ ಎಂಬಂತೆ ಜಾಗೃತಿ ಕಾರ್ಯಕ್ರಮ ಸಂಘಟಿಸುತ್ತಿದ್ದಾರೆ. ಹಾಗಾಗಿ ದಿನೇದಿನೆ ಪ್ರಕರಣ ಹೆಚ್ಚುತ್ತಿವೆ. ಬೆಳಕಿಗೆ ಬಾರದ ಪ್ರಕರಣ ಇನ್ನೂ ಹೆಚ್ಚಿವೆ’ ಎಂದು ಮಹಿಳಾ ಹೋರಾಟಗಾರ್ತಿ ಪ್ರಮೋದಾ ಹಜಾರೆ ಆರೋಪಿಸಿದರು.
ಜಿಲ್ಲೆಯ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಬಾಲಕಿಯರು ಗರ್ಭಿಣಿಯರಾದ ಮಾಹಿತಿ ಗೊತ್ತಿದ್ದರೂ, ಪೊಲೀಸ್ ಠಾಣೆಗಳಲ್ಲಿ ಸರಿಯಾಗಿ ದೂರು ದಾಖಲಾಗುತ್ತಿಲ್ಲ. ಪಾಲಕರಿಗೆ ಹೆದರಿ ಅಧಿಕಾರಿಗಳೂ ಕ್ರಮ ವಹಿಸುತ್ತಿಲ್ಲ ಎನ್ನುವ ಆರೋಪವಿದೆ.
ಮಾಹಿತಿ ಕೊಡುತ್ತಿದ್ದೇವೆ:
‘ಗರ್ಭಿಣಿಯರ ನೋಂದಣಿ ಪ್ರಕ್ರಿಯೆ ವೇಳೆ, ಬಾಲಕಿಯರು ಗರ್ಭ ಧರಿಸಿದ ಸಂಗತಿ ಬೆಳಕಿಗೆ ಬಂದಿದೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೂ ಮಾಹಿತಿ ಕೊಡುತ್ತಿದ್ದೇವೆ. ಅವರು ಪೊಲೀಸ್ ಠಾಣೆಯಲ್ಲಿ ಪತಿ, ದಂಪತಿಯ ಹೆತ್ತವರು ಮತ್ತು ಮದುವೆಗೆ ಕಾರಣವಾದವರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸುತ್ತಿದ್ದಾರೆ’ ಎಂದು ಜಿಲ್ಲಾ ಸಂತಾನೋತ್ಪತ್ತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಚೇತನ ಕಂಕಣವಾಡಿ ‘ಪ‍್ರಜಾವಾಣಿ’ಗೆ ತಿಳಿಸಿದರು.
‘ಬಾಲ್ಯದಲ್ಲೇ ಗರ್ಭ ಧರಿಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ನಿರಂತರವಾಗಿ ತಿಳಿವಳಿಕೆ ಮೂಡಿಸುತ್ತಿದ್ದೇವೆ. ಆದರೆ, ಬಡವರು, ವಲಸೆ ಬಂದವರು ಮದುವೆ ಮಾಡುತ್ತಿರುವುದರಿಂದ 16ರಿಂದ 18 ವರ್ಷದೊಳಗಿನ ಬಾಲಕಿಯರು ಗರ್ಭಿಣಿಯರಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜಾಗೃತಿ ಇನ್ನಷ್ಟು ಚುರುಕುಗೊಳಿಸುತ್ತೇವೆ’ ಎಂದು ಬೆಚ್ಚಿಬಿಳಿಸುವ ಸುದ್ಧಿಯನ್ನು ಪ್ರಜಾವಾಣಿ ವರದಿ ಮಾಡಿದೆ.