ಮೆಟ್ರೊ ರೈಲಿನಲ್ಲಿ ಭಿಕ್ಷೆ: ಯುವಕನಿಗೆ ಭದ್ರತಾ ಸಿಬ್ಬಂದಿ ದಂಡ
ಬೆಂಗಳೂರು: ‘ನಮ್ಮ ಮೆಟ್ರೊ’ ರೈಲಿನಲ್ಲಿ ಭಿಕ್ಷೆ ಬೇಡುತ್ತಿದ್ದ ಯುವಕನಿಗೆ ಬಿಎಂಆರ್‌ಸಿಎಲ್ ಭದ್ರತಾ ಸಿಬ್ಬಂದಿ ₹500 ದಂಡ ವಿಧಿಸಿದ್ದಾರೆ.
ಶ್ರವಣದೋಷವುಳ್ಳ ಕೊಪ್ಪಳದ 20 ವರ್ಷದ ಮಲ್ಲಿಕಾರ್ಜುನ್ ಯಶವಂತಪುರ ನಿಲ್ದಾಣದಲ್ಲಿ ಮೆಟ್ರೊ ಪ್ರಯಾಣದ ಕಾರ್ಡ್ ಖರೀದಿಸಿ ಅದರಲ್ಲಿ ₹150 ತುಂಬಿ ಮೆಟ್ರೊ ರೈಲು ಹತ್ತಿದ್ದರು. ‘ನಾನು ಕಿವುಡ ಮತ್ತು ಮೂಗ’ ಎಂದು ಬರೆದಿರುವ ಫಲಕವನ್ನು ಕುತ್ತಿಗೆಯಲ್ಲಿ ನೇತು ಹಾಕಿಕೊಂಡು ಕೋಚ್‌ನಿಂದ ಕೋಚ್‌ಗೆ ಭೇಟಿ ನೀಡಿ ಭಿಕ್ಷೆ ಬೇಡಿದ್ದರು. ಒಂದು ಗಂಟೆ ಭಿಕ್ಷೆ ಬೇಡಿ ಮಹಾಕವಿ ಕುವೆಂಪು ಮೆಟ್ರೊ ನಿಲ್ದಾಣದಲ್ಲಿ ಇಳಿದು ಹೋಗಿದ್ದರು. ಯುವಕನೊಬ್ಬ ಭಿಕ್ಷೆ ಬೇಡಿದ ಬಗ್ಗೆ ಮೆಟ್ರೊ ಸಿಬ್ಬಂದಿಗೆ ಸಾರ್ವಜನಿಕರು ಮಾಹಿತಿ ನೀಡಿದ್ದರು.
ಮೆಟ್ರೊದ ಎಲ್ಲ ನಿಲ್ದಾಣಗಳ ಸಿಬ್ಬಂದಿಗೆ ಈ ವಿಷಯವನ್ನು ರವಾನಿಸಲಾಗಿತ್ತು. ಮಲ್ಲಿಕಾರ್ಜುನ್ ಯಶವಂತಪುರದಲ್ಲೇ ಎರಡನೇ ಬಾರಿ ಮೆಟ್ರೊ ಹತ್ತಲು ಬಂದಾಗ ಸಿಬ್ಬಂದಿ ಹಿಡಿದು ಪರಿಶೀಲಿಸಿದ್ದಾರೆ. ಆತನ ಜೇಬಿನಲ್ಲಿ ₹ 960 ಪತ್ತೆಯಾಗಿತ್ತು. ಮೆಟ್ರೊ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡಿದ್ದಕ್ಕಾಗಿ (ಸೆಕ್ಷನ್ 59) ₹ 500 ದಂಡ ವಿಧಿಸಲಾಯಿತು. ಬಳಿಕ ಯುವಕನನ್ನು ಇಎನ್‌ಟಿ ತಜ್ಞ ವೈದ್ಯರ ಬಳಿ ಕರೆದುಕೊಂಡು ಹೋಗಿ ಶ್ರವಣದೋಷ ಇರುವುದು ಹೌದೇ ಎಂದು ಪರೀಕ್ಷೆ ನಡೆಸಲಾಯಿತು. ಶ್ರವಣದೋಷ ಇರುವುದು ದೃಢಪಟ್ಟಿದೆ. ಪರೀಕ್ಷೆಯ ಶುಲ್ಕ ₹ 100ನ್ನು ಬಿಎಂಆರ್‌ಸಿಲ್ ಭರಿಸಿದೆ. ಇನ್ನು ಮುಂದೆ ಈ ರೀತಿ ಮಾಡದಂತೆ ತಾಕೀತು ಮಾಡಿ ಕಳುಹಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಮ ಮೆಟ್ರೊದಲ್ಲಿ ಇದೇ ಮೊದಲ ಬಾರಿಗೆ ಭಿಕ್ಷೆ ಬೇಡಿರುವ ಪ್ರಕರಣ ದಾಖಲಾಗಿದೆ.