ನೀರಿನ ಸಂಪ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಸಾವು.

ಆನೇಕಲ್: ತಾಲ್ಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ತಿರುಪಾಳ್ಯದಲ್ಲಿ ಬುಧವಾರ ಸಂಜೆ ನೀರಿನ ಸಂಪ್ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಅಸ್ವಸ್ಥಗೊಂಡಿರುವ ಮತ್ತಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಹಾರ ಮೂಲದ ಚಂದನ್ ರಾಜವಂಶಿ (29) ಮತ್ತು ಪಿಂಟು ರಾಜವಂಶಿ (21) ಮೃತರು. ತಿರುಪಾಳ್ಯದ ಶ್ರೀನಿವಾಸರೆಡ್ಡಿ ಎಂಬುವರಿಗೆ ಸೇರಿದ ಸನ್‌ಶೈನ್ ಹೋಲ್ಡಿಂಗ್ ಕಂಪನಿಯ ನೀರಿನ ಸಂಪ್ ಸ್ವಚ್ಛಗೊಳಿಸಲು ಇಬ್ಬರು ಕಾರ್ಮಿಕರನ್ನು ಸಂಪ್‌ಗೆ ಇಳಿಸಲಾಗಿತ್ತು. ಅವರನ್ನು ರಕ್ಷಿಸಲು ಹೋದ ಕಂಪನಿ ಮಾಲೀಕ ಶ್ರೀನಿವಾಸರೆಡ್ಡಿ ಮತ್ತು ಕಾರ್ಮಿಕ ಜಗದೀಶ್ ಕೂಡ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಉಳಿದ ಕಾರ್ಮಿಕರು ಈ ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ. ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.