ಶಾಸಕ ಹೆಚ್ ಡಿ ರೇವಣ್ಣಗೆ ಸಮನ್ಸ್ ಜಾರಿಗೆ: ಹೈಕೋರ್ಟ್ ಆದೇಶ.
ಬೆಂಗಳೂರು: ಚುನಾವಣೆ ವೇಳೆ ಅಕ್ರಮ ಎಸಗಿರುವ ಆರೋಪದ ಮೇಲೆ ಹೊಳೆನರಸೀಪುರ ಕ್ಷೇತ್ರದ ಹೆಚ್ ಡಿ ರೇವಣ್ಣ ಶಾಸಕರಾಗಿ ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸುವಂತೆ ಕೋರಿರುವ ಅರ್ಜಿ ಸಂಬಂಧ, ವಿಧಾನಸಭೆ ಕಾರ್ಯದರ್ಶಿ ಮೂಲಕ ರೇವಣ್ಣ ಅವರಿಗೆ ಸಮನ್ಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಈ ಮೂಲಕ ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಬಳಿಕ, ಈಗ ಹೆಚ್ ಡಿ ರೇವಣ್ಣ ಮೇಲೂ ಅನರ್ಹತೆ ತೂಗುಗತ್ತಿ ನೇತಾಡುವಂತೆ ಆಗಿದೆ.
ಹೆಚ್.ಡಿ ರೇವಣ್ಣ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದ ದೇವರಾಜೇಗೌಡ ಅವರು ಸಲ್ಲಿಸಿದ್ದಂತ ಚುನಾವಣಾ ತಕರಾರು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿಂದ ನ್ಯಾಯಪೀಠವು ನಡೆಸಿತು. ಈ ಪ್ರಕರಣದಲ್ಲಿ ಹೆಚ್ ಡಿ ರೇವಣ್ಣ ಅವರಿಗೆ ಸಮನ್ಸ್ ಮರು ಜಾರಿಗೆ ಆದೇಶಿಸಲಾಗಿದೆ
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಅರ್ಜಿ ಸಂಬಂಧ ಈ ಹಿಂದೆ ಹೈಕೋರ್ಟ್ ಜಾರಿಗೊಳಿಸಿರುವ ಸಮನ್ಸ್ ಅನ್ನು ಹೆಚ್ ಡಿ ರೇವಣ್ಣ ಸ್ವೀಕರಿಸಿರಲಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಅದನ್ನು ಪರಿಗಣಿಸಿದ ನ್ಯಾಯಪೀಠವು, ವಿಧಾನಸಭೆ ಕಾರ್ಯದರ್ಶಿಗಳ ಮೂಲಕ ಮತ್ತೊಂದು ಬಾರಿ ಸಮನ್ಸ್ ಜಾರಿಗೊಳಿಸಲು ನಿರ್ದೇಶಿಸಿ, ವಿಚಾರಣೆಯನ್ನು ಸೆಪ್ಟೆಂಬರ್.25ಕ್ಕೆ ಮುಂದೂಡಿದೆ.