”ಬಿಜೆಪಿ ಬಿಟ್ಟು ಯಾವ ಶಾಸಕರೂ ಕಾಂಗ್ರೆಸ್‌ಗೆ ಹೋಗಲ್ಲ: ಸಚಿವ ಪ್ರಲ್ಹಾದ್ ಜೋಶಿ.
ಹುಬ್ಬಳ್ಳಿ: ಬಿಜೆಪಿ ಬಿಟ್ಟು ಯಾವೊಬ್ಬ ಶಾಸಕರೂ ಕಾಂಗ್ರೆಸ್‌ಗೆ ಹೋಗುವುದಿಲ್ಲ. ಇದೆಲ್ಲವೂ ಊಹಾಪೋಹ. ಪಕ್ಷದ ಸಂಘಟನೆ ಗಟ್ಟಿಯಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಬಗ್ಗೆ ರಾಜ್ಯಾಧ್ಯಕ್ಷರ ಜೊತೆ ಮಾತನಾಡಿದ್ದೇನೆ ಆ ರೀತಿಯ ಯಾವುದೇ ಬೆಳವಣಿಗೆ ಆಗಿಲ್ಲ ಎಂದು ಅವರೂ ಹೇಳಿದ್ದಾರೆ. ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್ ಅವರು ಪಕ್ಷ ಬಿಟ್ಟು ಹೋಗಲ್ಲ ಎಂದು ಅವರೇ ಹೇಳಿದ್ದಾರೆ. ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕೂಡ ನನ್ನೊಂದಿಗೆ ಮಾತ ನಾಡಿದ್ದು, ಅವರು ಪಕ್ಷ ತೊರೆಯಲ್ಲ ಎಂದಿದ್ದಾರೆ.
ಇನ್ನು, ನಾಳೆ ಏನಾಗುತ್ತೆ ಎಂದು ಹೇಳಲು ನಾನು ಭವಿಷ್ಯಗಾರನಲ್ಲ. ನನಗೆ ಇರುವ ಮಾಹಿತಿ ಪ್ರಕಾರ ಯಾರೂ ಬಿಜೆಪಿ ಬಿಟ್ಟು ಹೋಗಲ್ಲ ಎಂದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಧಾರವಾಡದಿಂದಲೇ ನಾನು ಸ್ಪರ್ಧಿಸುವೆ ಎಂದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತದೆ. ಮೋದಿಯವರ ನಾಯಕತ್ವ ಎಲ್ಲರಿಗೂ ಗೊತ್ತಿದೆ. ಹೀಗಾಗಿ, ಯಾರೂ ಬಿಜೆಪಿ ಬಿಟ್ಟು ಹೋಗಲ್ಲ. ಭ್ರಷ್ಟಾಚಾರ, ಗುತ್ತಿಗೆದಾರರ ಪರ್ಸೇಂಟೇಜ್ ಆರೋಪ, ಕಾವೇರಿ ವಿಷಯ ಡೈವರ್ಚ್ ಮಾಡಲು ಕಾಂಗ್ರೆಸ್‌ನವರು ಪಕ್ಷಾಂತರ ವಿಚಾರ ಮುಂದೆ ತಂದಿದ್ದಾರೆ ಎಂದು ಟೀಕಿಸಿದರು.