ಬೆಂಗಳೂರುಸುವರ್ಣ ಗಿರಿ ಟೈಮ್ಸ್

ರಾಜ್ಯಾದ್ಯಂತ ಭ್ರಷ್ಟರಿಗೆ ನಡುಕ; ಬೆಳ್ಳಂ ಬೆಳಗ್ಗೆಯೇ ಲೋಕಾಯುಕ್ತ ದಾಳಿ.!!

ಬೆಂಗಳೂರು: ಕರ್ನಾಟಕದ ನಾನಾ ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ದಾಳಿನಡೆಸಿದ್ದಾರೆ. ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿ ಶಾಕ್‌ ನೀಡಿದ್ದಾರೆ. ಬೀದರ್‌, ಮೈಸೂರು, ಧಾರವಾಡ, ಬೆಳಗಾವಿ ಸಹಿತ ಹಲವು ಕಡೆಗಳಲ್ಲಿ ನಾನಾ ಇಲಾಖೆಗಳ ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆದಿದೆ.

ಈಗಾಗಲೇ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕುತ್ತಿರುವ ಲೋಕಾಯುಕ್ತ ತಂಡಗಳು, ಅಕ್ರಮ ಆಸ್ತಿ, ಹಣದ ಮೇಲೆ ನಿಗಾ ಇರಿಸಿವೆ. ಮನೆಯಲ್ಲಿ ಸಂಗ್ರಹವಾಗಿರುವ ಆಭರಣಗಳು, ಐಷಾರಾಮಿ ವಸ್ತುಗಳು, ಕಾರು, ಬೈಕ್‌, ಮನೆ, ತೋಟ, ಜಮೀನು ಸಹಿತ ವಿವಿಧ ಆಸ್ತಿಗಳ ಮಾಹಿತಿಯನ್ನು ಜಾಲಾಡುತ್ತಿದ್ದಾರೆ. ಇದು ಸಂಜೆವರೆಗೂ ಮುಂದುವರೆಯಲಿದ್ದು, ರಾತ್ರಿ ಹೊತ್ತಿಗೆ ಅಕ್ರಮ ಆಸ್ತಿ ವಿವರ, ಅಧಿಕಾರಿಗಳ ದಾಳಿ ಮಾಹಿತಿ ಸಿಗಲಿದೆ.

ಗಡಿಜಿಲ್ಲೆ ಬೀದರ್‌ನಲ್ಲಿ ಬೆಳ್ಳಂಬೆಳ್ಳಿಗೆ ಬೀದರ್ ಜಿಲ್ಲಾ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ರವೀಂದ್ರಕುಮಾರ್ ರೊಟ್ಟಿ ಅವರ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆ ಲೋಕಾ ಪೊಲೀಸರ ತಂಡ ದಾಳಿ ನಡೆಸಿ ಎಲ್ಲಾ ದಾಖಲೆಗಳನ್ನು ಪರಿಶೀಲಿಸುತ್ತಿದೆ.

ರವೀಂದ್ರಕುಮಾರ್ ರೊಟ್ಟಿಗೆ ಲೋಕಾ ಶಾಕ್ ನೀಡಿದ್ದು, ಅವರ ಬೀದರ್, ಬೆಂಗಳೂರು ನಿವಾಸದ ಮೇಲೆ ದಾಳಿ ಮಾಡಲಾಗಿದೆ. ಬೀದರ್‌ನ ನೌಬಾದ್‌ನಲ್ಲಿರುವ ಕಚೇರಿ ಮೇಲೆ ಏಕಕಾಲಕ್ಕೆ ದಾಳಿಯಾಗಿದ್ದು ಬೀದರ್‌ನ ಗುಂಪಾ ನಿವಾಸದಲ್ಲೂ ದಾಖಲೆಗಳ ಪರಿಶೀಲನೆ ನಡೆದಿದೆ.ಲೋಕಾಯುಕ್ತ ಡಿವೈಎಸ್ಪಿ ಹನುಮಂತ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಸದ್ಯ ಬೀದರ್ ಜಿಲ್ಲಾ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ರವೀಂದ್ರಕುಮಾರ್ ರೊಟ್ಟಿ ಇದಕ್ಕೂ ಮೊದಲು ಬೀದರ್ ಡಿಸಿ ಕಚೇರಿಯಲ್ಲಿ ಶಿರಸ್ತೇದಾರ ಹಾಗೂ ಬಿಬಿಎಂಪಿಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಮೈಸೂರು ಮಹಾನಗರ ಪಾಲಿಕೆಯ ವಲಯ ಸಹಾಯಕ ಆಯುಕ್ತರಾಗಿರುವ ನಾಗೇಶ್ ಅವರ ಮನೆ ಮೇಲೂ ದಾಳಿಯಾಗಿದೆ. ಮೈಸೂರಿನಲ್ಲಿರುವ ಅವರ ಕಚೇರಿ, ಮನೆಯ ಜತೆಗೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿರುವ ನಾಗೇಶ್‌ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್‌ ಮಾರ್ಗದರ್ಶನದಲ್ಲಿಯೇ ದಾಳಿ ನಡೆಸಿ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.

ಧಾರವಾಡದಲ್ಲಿ ಕೆಐಎಡಿಬಿ ಎಇಇ ಗೋವಿಂದ ಭಜಂತ್ರಿ ಮನೆ ಮೇಳೆ ದಾಳಿಯಾಗಿದೆ. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಧಿಕಾರಿ ಕಮಲ ರಾಜ್ ಮನೆ ಮೇಲೂ ದಾಳಿ ಮಾಡಿರುವ ಮಾಹಿತಿಯಿದೆ. ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲ್ಲೂಕಿನ ಬೋರಗಾಂವ ಗ್ರಾಮ ಲೆಕ್ಕಾಧಿಕಾರಿ ವಿಠಲ್ ಡವಳೇಶ್ವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ.

Related Articles

Leave a Reply

Your email address will not be published. Required fields are marked *

Back to top button