ಬಜೆಟ್ನಲ್ಲಿ ಕರ್ನಾಟಕಕ್ಕೆ ಚೊಂಬು ಆರೋಪ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ತಿರುಗೇಟು !!
ಬೆಗಳೂರು: ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದೆ, ಬಜೆಟ್ನಲ್ಲಿ ಏನೂ ಕೊಟ್ಟಿಲ್ಲ ಅಂತ ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ಇದು ಶುದ್ಧ ಸುಳ್ಳು, ರಾಜ್ಯ ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ತಿರುಗೇಟು ನೀಡಿದರು.
ಯುಪಿಎ ಸರ್ಕಾರ ಇದ್ದಾಗ ರಾಜ್ಯಕ್ಕೆ 81,791 ಕೋಟಿ ರೂ. ನೀಡಿತ್ತು. ಆದರೆ 2014ರಿಂದ ಇಲ್ಲಿಯವರೆಗೆ ಎನ್ಡಿಎ ಸರ್ಕಾರ 2,95,818 ಕೋಟಿ ರೂಪಾಯಿ ನೀಡಿದೆ. ಕಳೆದ 10 ವರ್ಷದಲ್ಲಿ 2,36,955 ಕೋಟಿ ತೆರಿಗೆ ಹಂಚಿಕೆಯಾಗಿದೆ ಎಂದರು.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಜೆಟ್ನಲ್ಲಿ ಸ್ಟಾರ್ಟ್ಅಪ್ಗಳಿಗೆ ನಾವು ಹೆಚ್ಚಿನ ಒತ್ತು ನೀಡಿದ್ದೇವೆ. ಕೇಂದ್ರ ಬಜೆಟ್ನಲ್ಲಿ ಯುವಕರಿಗೆ ಮೂರು ಯೋಜನೆ ತಂದಿದ್ದೇವೆ. ಯುವಕರಿಗೆ ತರಬೇತಿ, ಇಂಟರ್ನ್ಶಿಪ್ ಯೋಜನೆ, ಕೌಶಲ್ಯಾಭಿವೃದ್ಧಿ ನೀಡಲಾಗುವುದು. ಎಂಎಸ್‌ಎಮ್‌ಇಗಳಿಗೆ ಸ್ವಲ್ಪ ಸಮಸ್ಯೆ ಆಗುತ್ತಿದೆ, ಆ ಸಮಸ್ಯೆ ಬಗೆಹರಿಸಲು ಕೇಂದ್ರ ಬಜೆಟ್ನಲ್ಲಿ ಉತ್ತರ ನೀಡಿದ್ದೇವೆ. ಬಾಹ್ಯಾಕಾಶ ವಲಯಕ್ಕೆ ಬೆಂಗಳೂರಿನ ಕೊಡುಗೆ ಇದೆ. ಆವಾಸ್ ಯೋಜನೆಯಡಿ ಬಡ ವರ್ಗದ ಜನರಿಗೆ ಮನೆ ನೀಡಲಾಗುತ್ತಿದೆ.
ಮಹಿಳೆಯರು, ಕೃಷಿ ವಲಯಕ್ಕೂ ಕೇಂದ್ರದಿಂದ ಯೋಜನೆ ತಂದಿದ್ದೇವೆ. ಈ ಎಲ್ಲ ಯೋಜನೆಗಳ ಪ್ರಯೋಜನ ಕರ್ನಾಟಕವೂ ಪಡೆದುಕೊಳ್ಳುತ್ತದೆ ಎಂದು ತಿಳಿಸಿದರು.
ಬೆಂಗಳೂರಿನ ಪೀಣ್ಯದಲ್ಲಿ ಸಣ್ಣ ಕೈಗಾರಿಕೆಗಳಿವೆ. ಕೃಷಿ ವಲಯದ ವಿಸ್ತರಣೆಗೆ ಬೆಂಗಳೂರು ಕೊಡುಗೆ ಇದೆ. ಕಲಬುರಗಿಯಲ್ಲಿ ಪಿಎಂ ಮಿತ್ರಾ ಪಾರ್ಕ್ ನಿರ್ಮಾಣವಾಗಲಿದೆ. ರೈಲ್ವೇ ವಲಯಕ್ಕೂ ಕೋಟಿ ಕೋಟಿ ಹಣ ನೀಡಿದ್ದೇವೆ. 825 ಕೋಟಿ ರೂ. ಅನುದಾನ ಯುಪಿಎ ಸರ್ಕಾರ ಇದ್ದಾಗ ನೀಡಿತ್ತು. ಆದರೆ ಈ ಬಜೆಟ್ನಲ್ಲಿ 7,559 ಕೋಟಿ ಅನುದಾನ ಕೊಟ್ಟಿದ್ದೇವೆ. 47,016 ಕೋಟಿ ಮೊತ್ತದ 31 ಯೋಜನೆಯ ರೈಲ್ವೆ ಕಾಮಗಾರಿ ನಡೆಯುತ್ತಿದೆ. 640 ರೈಲ್ವೇ ಸೇತುವೆ, ವಂದೇ ಭಾರತ್ ರೈಲು ಸೇರಿ ಹಲವು ರೈಲ್ವೆ ಯೋಜನೆ ಜಾರಿಯಲ್ಲಿವೆ. ಐಐಟಿ ಧಾರವಾಡ, ತುಮಕೂರಲ್ಲಿ ಮೊದಲ ಕೈಗಾರಿಕಾ ಕಾರಿಡಾರ್ ಪಾರ್ಕ್, 7 ಸ್ಮಾರ್ಟ್ ಸಿಟಿ ನಿರ್ಮಾಣವಾಗುತ್ತಿವೆ ಎಂದು ಮಾಹಿತಿ ನೀಡಿದರು.