ರಾಜ್ಯದ ದೊಡ್ಡ ಹು-ದಾ ಮಹಾನಗರ ಸಭೆ ಇನ್ಮುಂದೆ ಎರಡು ಭಾಗ: ಸಚಿವ ಸಂಪುಟ ಅನುಮೋದನೆ
ಬೆಂಗಳೂರು: ರಾಜ್ಯದ ದೊಡ್ಡ ಮಹಾನಗರ ಸಭೆಯಾಗಿದ್ದ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ, ಪ್ರತ್ಯೇಕವಾಗಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ಹುಬ್ಬಳ್ಳಿ ನಗರ ಸಭೆ ಮಾಡಲು ಗುರುವಾರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಕೂಡಲೇ ಹುಬ್ಬಳ್ಳಿಯಿಂದ ಧಾರವಾಡವನ್ನು ಪ್ರತ್ಯೇಕ ಮಾಡಿ ಎರಡು ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ ಪ್ರಸ್ತುತ ಇರುವ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂ.1 ರಿಂದ 26 ಅನ್ನು ಸೇರಿಸಿ ಪ್ರತ್ಯೇಕ ಧಾರವಾಡ ಮಹಾನಗರ ಪಾಲಿಕೆ ರಚಿಸಲಾಗುತ್ತದೆ. ಅದೇ ರೀತಿ ಇನ್ನೂಳಿದ ವಾರ್ಡ್ ನಂ.27 ರಿಂದ 82 ರವರೆಗಿನ ಪ್ರದೇಶಗಳನ್ನು ಹುಬ್ಬಳ್ಳಿ ಮಹಾನಗರ ಪಾಲಿಕೆಯನ್ನಾಗಿ ಮುಂದುವರೆಸಲು ಅನುಮತಿ ನೀಡಲಾಗಿದೆ.
ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಘೋಷಣೆಯಾದ ಹಿನ್ನೆಲೆಯಲ್ಲಿ ಧಾರವಾಡ ಮಹಾನಗರ ಪಾಲಿಕೆ ಕಚೇರಿ ಎದುರು ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
ಹತ್ತು ವರ್ಷದ ಕೂಗು: 2014ರಲ್ಲೇ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜನೆ ಮಾಡಬೇಕೆಂಬ ಒತ್ತಾಯ ಹತ್ತು ವರ್ಷದಿಂದಲೂ ಕೂಗು ಇತ್ತು. ಧಾರವಾಡದ ಜನಸಂಖ್ಯೆ 6.5 ಲಕ್ಷ ದಾಟಿರುವುದರಿಂದ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕೆಂದು ಧಾರವಾಡದ ಜನ ಆಗ್ರಹಿಸಿದ್ದರು. ಪಾಲಿಕೆಯ ರಚನೆಗೆ 3.5 ಲಕ್ಷ ಜನಸಂಖ್ಯೆಯ ಮೇಲಿರಬೇಕು. ಹೀಗಾಗಿ, ಇದೀಗ ಧಾರವಾಡವನ್ನು ಪ್ರತ್ಯೇಕ ಮಹಾನಗರ ಪಾಲಿಕೆಯಾಗಿ ಘೋಷಿಸಲು ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.