ಮೂಕನಾಯಕ !
ಡಾ.ಬಾಬಾಸಾಹೇಬ್ ಅಂಬೇಡ್ಕರರು 31/1/1920 ರಲ್ಲಿ ಪ್ರಾರಂಬಿಸಿದ ಅವರ ಮೊದಲ ಪತ್ರಿಕೆ ಇದು. ಇಂದಿಗೆ 103 ವರ್ಷಗಳ ಇತಿಹಾಸವಿದು !
ಬಾಬಾಸಾಹೇಬ್ ಡಾ. ಅಂಬೇಡ್ಕರರು ಕೆಳವರ್ಗದವರಲ್ಲಿ ಜಾತಿ ವ್ಯವಸ್ತೆ ವಿರುದ್ದ ಜಾಗೃತಿ ಮೂಡಿಸುವುದಕ್ಕಾಗಿ ಇಂತಹ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟಿದ್ದರು. ಆಡು ಭಾಷೆಯಲ್ಲಿ ಜನಸಾಮಾನ್ಯರಿಗೆ ಮನಮುಟ್ಟುವಲ್ಲಿ ನೋಡಿಕೊಳ್ಳುವುದಕ್ಕಾಗಿ ತಮ್ಮ ಬರವಣಿಗೆಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದರು. ವಿಡಂಬನಾತ್ಮಕವಾಗಿಯೂ ಬರೆಯುತ್ತಿದ್ದರು.
ಜಾತಿ ವ್ಯವಸ್ತೆ ಬಗ್ಗೆ ಅತಿಯಾದ ಆಕ್ರೋಶವಿತ್ತು.ಅದನ್ನೆಲ್ಲ ಬರವಣಿಗೆ ಮೂಲಕ ಸಮಾಜದ ಮುಂದಿಟ್ಟು ಸಮ ಸಮಾಜದ ಹಕ್ಕು ಮಂಡಿಸುತ್ತಿದ್ದರು.
ಬಾಬಾಸಾಹೇಬರಲ್ಲಿ ಯಾವುದೇ ಹಿಂಜರಿಕೆಯಾಗಲೀ, ಅಳುಕು ಆಗಲೀ ಅವರಲ್ಲಿ ಇರಲೇ ಇಲ್ಲ. ನೇರವಾಗಿ ಹೇಳಬೇಕಾಗಿದ್ದನ್ನು ಪತ್ರಿಕೆ ಮೂಲಕ ಹೇಳಿಬಿಡುತ್ತಿದ್ದರು. ಒಮ್ಮೆ ಲೋಕಮಾನ್ಯ ಟಿಳಕರ ಬಗ್ಗೆ ಬರೆಯುತ್ತ ಇವನಿಗೆ ಲೋಕಮಾನ್ಯ ಎಂದು ಯಾರು ಕರೆದರು ಮತ್ತು ಅದಕ್ಕೆ ಅವನು ಅರ್ಹನೇ !? ಎಂದು ಪ್ರಶ್ನೆ ಮಾಡಿದ್ದಿದೆ. ಇದಷ್ಟೇ ಅಲ್ಲ ಬಾಬಾಸಾಹೇಬರಿಂದ ಪ್ರೇರಿತನಾದವನೊಬ್ಬ “ಲೋಕಮಾನ್ಯ ಬೂಟು ಮತ್ತು ಚಪ್ಪಲಿಗಳ ಅಂಗಡಿ ” ಎಂದು ಚಪ್ಪಲಿ ಅಂಗಡಿ ಹನ್ನೊಂದು ತೆಗೆದ. ಈ ಚಪ್ಪಲ್ ಅಂಗಡಿಯ ಜಾಹೀರಾತನ್ನು ಮೂಕನಾಯಕ ಪತ್ರಿಕೆಯಲ್ಲಿ ಮೇಲಿಂದ ಮೇಲೆ ಹಾಕಿ ಬ್ರಾಹ್ಮಣರಿಗೆ ತಿವಿಯುವ ಕೆಲಸ ಮಾಡಿದ್ದಿದೆ. ಗಾಂಧಿ -ನೇಹರುಗಳನ್ನೂ ಬಿಡದ ಅಂಬೇಡ್ಕರರಲ್ಲಿ ಸಮಾನತೆ ಬಯಸುವ ಮಾತೃ ಹೃದಯವಿತ್ತು. ಅದಕ್ಕಾಗಿ ಎಷ್ಟೇ ಎತ್ತರದವನಿದ್ದರೂ ಸಹ ಆತ ಡೊಂಗಿತನದ ಬೂಟಾಟಿಕೆಯ ನಾಯಕನಾಗಿದ್ದರೆ ಅಂತವನಿಗೆ ಸರಿಯಾದ ಬಿಸಿಮುಟ್ಟಿಸುವ ಕೆಲಸ ಮಾಡುತ್ತಿದ್ದರು.
ಬಾಬಾಸಾಹೇಬರು ಇದೊOದೇ ಪತ್ರಿಕೆಯನ್ನಲ್ಲ. ಇನ್ನೂ ಬಹಿಸ್ಕೃತ ಭಾರತ(1927), ಜನತಾ (1930), ಪ್ರಭುದ್ದ ಭಾರತ (1956) ದಂತಹ ಪತ್ರಿಕೆಗಳನ್ನು ತಗೆದ ಹೆಗ್ಗಳಿಕೆಯೂ ಅವರದಿದೆ. ಇದು ದಲಿತರ ಇತಿಹಾಸ !
ಡಾ.ಗೌತಮ್ ಬನಸೋಡೆ.