ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್‌ಗಿಂತ ನೆಹರೂ ಪಾತ್ರ ಹಿರಿದು: ಸುಧೀಂದ್ರ ಕುಲಕರ್ಣಿ
ಮುಂಬೈ: ಸಂವಿಧಾನ ರಚನೆಯಲ್ಲಿ ಬಿ.ಆರ್.ಅಂಬೇಡ್ಕರ್ ಅವರಿಗಿಂತ ದೇಶದ ಮೊದಲ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರೂ ಅವರ ಕೊಡುಗೆ ಹೆಚ್ಚು ಎಂದು ರಾಜಕೀಯ ವಿಶ್ಲೇಷಕ ಸುಧೀಂದ್ರ ಕುಲಕರ್ಣಿ ತಮ್ಮ ಲೇಖನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಸುಧೀಂದ್ರ ಕುಲಕರ್ಣಿ ಈ ಬಗ್ಗೆ ಸುದ್ದಿ ಮಾಧ್ಯಮವೊಂದರಲ್ಲಿ ಲೇಖನ ಬರೆದಿದ್ದು, ಅದರ ಲಿಂಕ್ ಅನ್ನು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದರು. ಅದನ್ನು ನಂತರ ತೆಗೆದುಹಾಕಲಾಗಿದೆ. ಲೇಖನದ ಬಗ್ಗೆ ಬಿಜೆಪಿ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದು, ‘ದಲಿತರು ಹಾಗೂ ಅಂಬೇಡ್ಕರ್ ಅವರಿಗೆ ಅವಮಾನ ಮಾಡಲಾಗಿದೆ’ ಎಂದು ಟೀಕಿಸಿದೆ.
‘ಸಂವಿಧಾನ ರಚನೆಯಲ್ಲಿ ಬಾಬಾ ಸಾಹೇಬರು ಮುಖ್ಯ ಪಾತ್ರ ವಹಿಸಿದ್ದರು ಎಂದು ಇಡೀ ಜಗತ್ತು ನಂಬಿದೆ. ಈ ಬಗೆಗಿನ ಪಿತ್ರೋಡಾ ಅವರ ಅಭಿಪ್ರಾಯವು ಬಾಬಾ ಸಾಹೇಬರನ್ನು ಅವಮಾನಿಸುವ ಕಾಂಗ್ರೆಸ್ ಮನಸ್ಥಿತಿಯನ್ನು ಸೂಚಿಸುತ್ತದೆ’ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಾಲ್ ಟೀಕಿಸಿದ್ದಾರೆ.
ಸುಧೀಂದ್ರ ಕುಲಕರ್ಣಿ ತಮ್ಮ ಲೇಖನವನ್ನು ಸಮರ್ಥಿಸಿಕೊಂಡಿದ್ದಾರೆ. ‘ಸಂವಿಧಾನ ರೂಪಿಸುವಲ್ಲಿ ಅಂಬೇಡ್ಕರ್ ಅವರಿಗಿಂತ ನೆಹರೂ ಪಾತ್ರ ಹಿರಿದು’ ಎಂದಿರುವ ಅವರು, ‘ಈ ಬಗ್ಗೆ ಸಂಶೋಧನೆ ಮಾಡಿರುವೆ. ಬಿ.ಆರ್. ಅಂಬೇಡ್ಕರ್ ಅವರನ್ನು ಸಂವಿಧಾನದ ಕರ್ತೃ ಎಂದು ಭಾವಿಸಲಾಗಿದೆ. ಆದರೆ, ಇತಿಹಾಸದ ವಾಸ್ತವಾಂಶಗಳನ್ನು ಪರಿಶೀಲಿಸಿದರೆ, ಅದು ಸುಳ್ಳು ಎನ್ನುವುದು ತಿಳಿಯುತ್ತದೆ’ ಎಂದಿದ್ದಾರೆ.