ಹಣಕ್ಕಾಗಿ ಯುವಕನ ಕಿಡ್ನಾಪ್: 24 ಗಂಟೆ ಒಳಗಾಗಿ ಪ್ರಕರಣ ಭೇದಿಸಿದ ನವನಗರದ ಪೋಲಿಸರು.
ಹುಬ್ಬಳ್ಳಿ: ಎಗ್ ರೈಸ್ ವ್ಯಾಪಾರ ಇಟ್ಟುಕೊಂಡಿದ್ದ ಯುವಕನೊಬ್ಬನನ್ನು ಅಪಹರಿಸಿ ಕೂಡಿಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳನ್ನು ಪ್ರಕರಣ ದಾಖಲಾದ 24 ಗಂಟೆ ಒಳಗಾಗಿ ಬಂಧಿಸುವಲ್ಲಿ ನವನಗರ ಎಪಿಎಂಸಿ ಪೋಲಿಸರು ಯಶಸ್ವಿಯಾಗಿದ್ದಾರೆ.
ನವನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಜ.25 ರಂದು ಉಣಕಲ್ ಸಾಯಿನಗರದ ನಿವಾಸಿ ಶಾನವಾಜ ಹುಲಗೂರ (21) ಎಂಬಾತನನ್ನು ಹಣಕ್ಕಾಗಿ ಅಪಹರಣ ಮಾಡಲಾಗಿತ್ತು. ಬಳಿಕ ಅಪಹರಣಕ್ಕೆ ಒಳಗಾದ ಯುವಕನ ತಾಯಿ ನವನಗರ ಪೋಲಿಸ್ ಠಾಣೆಯಲ್ಲಿ ತನ್ನ ಮಗ ಕಿಡ್ನಾಪ ಆಗಿದ್ದಾನೆಂದು ದೂರು ನೀಡಿದರು.
ಪ್ರಕರಣವನ್ನು ದಾಖಲಿಸಿಕೊಂಡ ನವನಗರದ ಪೋಲಿಸರು ವಿಶೇಷ ತಂಡ ರಚಿಸಿ ಕಾರ್ಯಾಚರಣೆಗೆ ಇಳಿದು ಕೆಲವೇ ಗಂಟೆಗಳಲ್ಲಿ ಅಪಹರಣಕ್ಕೆ ಒಳಗಾದ ಯುವಕನನ್ನು ರಕ್ಷಿಸಿ, ತಾಜನಗರದ ನಿವಾಸಿ ರಾಘವೇಂದ್ರ ಮಡಿವಾಳರ (21), ಜ್ಯೋತಿ ಕಾಲೋನಿಯ ರಮೇಶ ಜಾವೂರ (21) ಹಾಗೂ ಮತ್ತಿಬ್ಬರನ್ನು ಬಂಧಿಸಿರುವ ಪೋಲಿಸರು, ಕೋರ್ಟ್’ಗೆ ಹಾಜರು ಪಡಿಸಿ, ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಇನ್ನು ಪ್ರಕರಣವನ್ನು ಕೆಲವೇ ಕೆಲವು ಗಂಟೆಗಳಲ್ಲಿ ಭೇದಿಸಿದ ನವನಗರ ಠಾಣೆ ಇನ್ಸ್ಪೆಕ್ಟರ್ ಬಾಳು ಮಂಟೂರ ನೇತೃತ್ವದಲ್ಲಿ ಪಿಎಸ್ಐ ಬಿ.ಎನ್ ಸಾತಣ್ಣವರ್, ವಿದ್ಯಾನಗರ ಪಿಎಸ್ಐ ಶ್ರೀಮಂತ ಹುನಸಿಕಟ್ಟಿ, ಸಿಬ್ಬಂದಿ ಜನರಾದ ರಮೇಶ್ ಹಲ್ಲೆ, ಶರಣ ಗೌಡ, ಮಧು ಮೂಲಿಮನಿ, ರಾಘು ರಾಮದುರ್ಗ, ರವಿ ಹೊಸಮನಿ, ಚಂದ್ರು ಬಕ್ಸದ್, ಇವರುಗಳ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.