ಲೋಕಾಯುಕ್ತ ಅಧಿಕಾರಿಯೆಂದು ಪೋಸು ಕೊಟ್ಟು 30 ಸರ್ಕಾರಿ ಅಧಿಕಾರಿಗಳಿಗೆ ಮೋಸ.!
ಬೆಂಗಳೂರು: ಲೋಕಾಯುಕ್ತ ಅಧಿಕಾರಿಯೆಂದು ಪೋಸು ಕೊಟ್ಟು ಮೂವತ್ತಕ್ಕೂ ಸರ್ಕಾರಿ ಅಧಿಕಾರಿಗಳಿಗೆ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಇದೀಗ ಬೆಂಗಳೂರು ಸಿಸಿಬಿ ಪೊಲೀಸರು ನಕಲಿ ಲೋಕಾಯುಕ್ತ ಅಧಿಕಾರಿಯನ್ನು ಬಂಧಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಶ್ರೀನಾಥ್ ರೆಡ್ಡಿ (34) ಬಂಧಿತ ಆರೋಪಿ. ಈತ 2007ರಿಂದಲೇ ಇದೇ ಮಾದರಿಯ ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ. ಹಿಂದೆ ಬೀಗ ಹಾಕಿರುತ್ತಿದ್ದ ಮನೆಗಳಿಗೆ ನುಗ್ಗಿ ಕಳವು ಮಾಡುತ್ತಿದ್ದ. ಬಳಿಕ ಈತ ಲೋಕಾಯುಕ್ತ ಪೊಲೀಸ್ ಅಧಿಕಾರಿಯೆಂದು ಹೇಳಿ ಸರ್ಕಾರಿ ಅಧಿಕಾರಿಗಳನ್ನು ಯಾಮಾರಿಸಲು ತೊಡಗಿದ್ದ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ತೆಲುಗು ಚಲನಚಿತ್ರಗಳಿಂದ ಸ್ಫೂರ್ತಿ ಪಡೆದ ಈತ ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿಸಿ ಕುಕೃತ್ಯ ಮುಂದುವರಿಸಿದ್ದ. ಕೇವಲ 10ನೇ ತರಗತಿ ಓದಿರುವ ಆರೋಪಿ 36 ಸರ್ಕಾರಿ ಅಧಿಕಾರಿಗಳಿಗೆ ವಂಚನೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಇದರಲ್ಲಿ ಒಬ್ಬರು ಮಾತ್ರ ಪೊಲೀಸ್ ದೂರು ನೀಡಿದ್ದರು. ಅದನ್ನು ಆಧರಿಸಿ ತನಿಖೆ ನಡೆಸಿದಾಗ ಖದೀಮ ಸಿಕ್ಕಿಬಿದ್ದಿದ್ದಾನೆ.
ಆರೋಪಿ ಶ್ರೀನಾಥ್ ರೆಡ್ಡಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿಯೂ ಇದೇ ರೀತಿ ಸರ್ಕಾರಿ ಅಧಿಕಾರಿಗಳಿಗೆ ವಂಚಿಸಿದ್ದಾನೆ. ಈತನ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣದ ಹೆಚ್ಚಿನ ತನಿಖೆಗೆ ಸಿಸಿಬಿಗೆ ವರ್ಗಾಯಿಸಲಾಗಿತ್ತು.