ಬಳ್ಳಾರಿ: ವಿವಿ ಹೊರಗುತ್ತಿಗೆ ನೌಕರರ ವೇತನ ಆಕ್ರಮ: ಎಸ್ ಪಿ ಅಂಗಳಕ್ಕೆ.
ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 137 ಹೊರ ಗುತ್ತಿಗೆ ನೌಕರರಿಗೆ ನಿಗದಿಗಿಂತ ಕಡಿಮೆ ವೇತನ ಪಾವತಿಸಿದ್ದು, 1.07 ಕೋಟಿ ವಂಚಿಸಲಾಗಿದೆ ಎಂದು ಆರೋಪಿಸಿ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮೌಖಿಕ ದೂರು ಸಲ್ಲಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರನ್ನು ಬುಧವಾರ ಮಧ್ಯಾಹ್ನ ಭೇಟಿ ಮಾಡಿದ ಹೊರಗುತ್ತಿಗೆ ನೌಕರರ ನಿಯೋಗ, ವಿಶ್ವವಿದ್ಯಾಲಯ ಆಡಳಿತ ಹಾಗೂ ಗುತ್ತಿಗೆದಾರರಿಂದ ತಮಗೆ ವಂಚನೆ ಆಗಿದೆ ಎಂದು ಮೌಖಿಕ ದೂರು ನೀಡಿದೆ. ಮೌಖಿಕ ದೂರು ಬಂದಿರುವುದನ್ನು ಪೊಲೀಸ್ ಪರಿಷ್ಠಾಧಿಕಾರಿ ಖಚಿತಪಡಿಸಿದರು.
ವಿವಿ ಹೊರಗುತ್ತಿಗೆ ನೌಕರರು ಮತ್ತು ಕುಲಸಚಿವ ಪ್ರೊ.ಎಸ್.ಸಿ ಪಾಟೀಲ ಬಂದಿದ್ದರು. ತಕ್ಷಣ ಸಂಬಂಧ ಪಟ್ಟವರ ಸಭೆ ಕರೆದು ಕಡಿತಗೊಳಿಸಿರುವ ವೇತನ ಪಾವತಿ ಕುರಿತು ಖಚಿತ ಭರವಸೆ ನೀಡುವಂತೆ ಕುಲಸಚಿವರಿಗೆ
ಹೇಳಿದ್ದೇನೆ. ಯಾವ ದಿನದಂದು ಪಾವತಿ ಮಾಡಲಾಗುವುದು? ಎಷ್ಟು ಬಾಕಿ ಪಾವತಿ ಮಾಡಲಾಗುವುದು? ಎಂಬುದನ್ನು ಅಧಿಕೃತವಾಗಿ ದಾಖಲಿಸುವಂತೆ ತಿಳಿಸಿದ್ದೇನೆ. ತಕ್ಷಣ ನಿರ್ಧಾರ ಮಾಡದಿದ್ದರೆ ವಂಚನೆ ಪ್ರಕರಣ ದಾಖಲಿಸುವುದಾಗಿ ಸ್ಪಷ್ಟ ಪಡಿಸಿದ್ದೇನೆ ಎಂದು ರಜಿತ್ ಕುಮಾರ್ ಬಂಡಾರು ವಿವರಿಸಿದರು.
ಕುಲಪತಿ ಸಿದ್ದು ಪಿ. ಅಲಗೂರ ಅವರ ಅಧಿಕಾರಾವಧಿ ಈ ತಿಂಗಳ ಅಂತ್ಯದಲ್ಲಿ ಮುಗಿಯಲಿದೆ. ಕುಲಸಚಿವ ಪ್ರೊ. ಎಸ್. ಸಿ. ಪಾಟೀಲ ಅವರ ಜಾಗಕ್ಕೆ ರಾಜ್ಯ ಸರ್ಕಾರ ಈಗಾಗಲೇ ಹೊಸಬರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಈ ಕಾರಣಕ್ಕೆ ವಿಳಂಬ ಮಾಡದೆ ಸಭೆ ಕರೆಯಲು ಕುಲಸಚಿವರಿಗೆ ಎಸ್‌ಪಿ ಸೂಚಿಸಿದ್ದಾರೆ.
ವಿಶ್ವವಿದ್ಯಾಲಯ ನೌಕರರು ಮಂಗಳವಾರ ಕಾರ್ಮಿಕ ಇಲಾಖೆ ಉಪ ಕಮಿಷನರ್ ಮತ್ತು ಉಪ ಸಹಾಯಕ ಕಮಿಷನರ್ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ.
ಕಾರ್ಮಿಕ ಅಧಿಕಾರಿಗಳು ತಮಗಾಗಿರುವ ಅನ್ಯಾಯ
ಸರಿಪಡಿಸುವ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಅದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೌಖಿಕ ದೂರಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನ್ಯಾಯ ಸಿಗುವ ಭರವಸೆ ಇದೆ ಎಂದು ಕೆಲವು ನೌಕರರು ತಿಳಿಸಿದರು.
ಗುತ್ತಿಗೆ ನೌಕರರ ವೇತನ ಪಾವತಿಯಲ್ಲಿ ಅಕ್ರಮ ನಡೆದಿದೆ ಎಂಬ ಅರೋಪಗಳ ವಿಚಾರಣೆಗೆ ಸಿಂಡಿಕೇಟ್ ಸದಸ್ಯ ಪ್ರೊ. ಎಚ್. ಜಯಪ್ರಕಾಶ್‌ಗೌಡರ ಅಧ್ಯಕ್ಷತೆಯಲ್ಲಿ ಸತ್ಯಶೋಧನಾ ಸಮಿತಿ ರಚಿಸಲಾಗಿತ್ತು. ಧಾರವಾಡದ ಇಂಡಸ್ ಸೆಕ್ಯುರಿಟಿ ಸರ್ವಿಸಸ್ & ಡಿಟೆಕ್ಟಿವ್ ವಿಶ್ವ ವಿದ್ಯಾಲಯದೊಂದಿಗೆ ಮಾಡಿಕೊಂಡ ಒಪ್ಪಂದಂತೆ ವೇತನ ಪಾವತಿಸದೆ ಇರುವುದು ಕಂಡುಬಂದಿದೆ ಉಲ್ಲೇಖಿಸಿದೆ. ವರದಿ ಕೊಟ್ಟು 9 ತಿಂಗಳಾದರೂ ಯಾರ ಮೇಲೂ ಕ್ರಮ ಕೈಗೊಳ್ಳದೆ ವಿ.ವಿ ತಟಸ್ಥವಾಗಿ ಕುಳಿತಿದೆ ಎಂಬುದು ನೌಕರರ ಅಳಲು.