“ಮಣಿಪುರಕ್ಕೆ ಭೇಟಿ ಕೊಟ್ಟ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್.
ಮಣಿಪುರ: ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ನಡುವೆ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರನ್ನು ಭೇಟಿ ಮಾಡಲು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಭಾನುವಾರ ಇಂಫಾಲ್‌ಗೆ ಆಗಮಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಕಾರಣಕ್ಕಾಗಿ ರಾಜ್ಯಕ್ಕೆ ಭೇಟಿ ನೀಡುವುದನ್ನು ಮುಂದೂಡುವಂತೆ ರಾಜ್ಯ ಬಿಜೆಪಿ ಸರ್ಕಾರ ಶನಿವಾರ ಮನವಿ ಮಾಡಿತ್ತು. ಆದರೂ ಸರ್ಕಾರದ ಮನವಿಯನ್ನು ಧಿಕ್ಕರಿಸಿ ಸ್ವಾತಿ ಮಲಿವಾಲ್ ಅವರು ಭಾನುವಾರ ಇಂಫಾಲ್‌ಗೆ ಭೇಟಿ ನೀಡಿದ್ದಾರೆ.
ಬಿಜೆಪಿ ಸರ್ಕಾರ ಮೇ 3ರಂದು ಮಣಿಪುರದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿತ್ತು. ಈ ವೀಡಿಯೊ ಜುಲೈ 19ರಂದು ವೈರಲ್ ಆಯಿತು. ಆ ಬಳಿಕ ಪ್ರತಿ ಪಕ್ಷಗಳು ಮತ್ತು ಸುಪ್ರೀಂ ಕೋರ್ಟ್ ತೀಕ್ಷ್ಣ ಮಾತುಗಳಿಂದ ಟೀಕಿಸಿದ್ದವು. ಆ ನಂತರ ಮಣಿಪುರ ಪೊಲೀಸರು ಪ್ರಕರಣದ ಆರೋಪಿಗಳನ್ನು ಬಂಧಿಸಲು ಪ್ರಾರಂಭಿಸಿದರು. ಮೇ 18 ರಂದು ಎಫ್‌ಐಆರ್ ಸಲ್ಲಿಸಿದ್ದರೂ ಸಹ ಈವರೆಗೂ ಕ್ರಮ ಕೈಗೊಂಡಿರಲಿಲ್ಲ. ಇದೀಗ ಆರು ಆರೋಪಿಗಳನ್ನು ಬಂಧಿಸಲಾಗಿದ್ದು, ಆರನೇ ವ್ಯಕ್ತಿ ಬಾಲಾಪರಾಧಿಯಾಗಿದ್ದಾನೆ.
ಭಾನುವಾರ ಇಂಫಾಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಲಿವಾಲ್, ”ಲೈಂಗಿಕ ದೌರ್ಜನ್ಯದ ದೂರುದಾರರ ಸ್ಥಿತಿಗತಿ ಕುರಿತು ಮಾತನಾಡಲು ಮುಖ್ಯಮಂತ್ರಿ ಯೊಂದಿಗೆ ಸಮಯ ಕೋರಿದ್ದೇನೆ ಎಂದು ಹೇಳಿದರು.
ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ಪಾರಾಗಲು ಹಲವಾರು ಮಣಿಪುರಿ ಮಹಿಳೆಯರು ದೆಹಲಿಗೆ ಬಂದಿದ್ದಾರೆ. ನಾನು ಅವರ ಸಮಸ್ಯೆಗಳನ್ನು ಲಾಲಿಸಲು ಬಯಸುತ್ತೇನೆ ಎಂದು ಹೇಳಿದರು.
ಈ ಮಣಿಪುರ ಹಿಂಸಾಚಾರದಲ್ಲಿ 160ಕ್ಕೂ ಹೆಚ್ಚು ಜನರನ್ನು ಸಾಯಿಸಲಾಗಿದೆ. 60,000 ಜನರನ್ನು ಸ್ಥಳಾಂತರಿಸಲಾಗಿದೆ. ಹಿಂಸಾಚಾರದಿಂದ ಧ್ವಂಸಗೊಂಡಿರುವ ಮಣಿಪುರಕ್ಕೆ ಭೇಟಿ ನೀಡುವಂತೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರನ್ನು ಒತ್ತಾಯಿಸುತ್ತೇನೆ ಎಂದು ಹೇಳಿ ಪ್ರತಿಕ್ರಿಯಿಸಿದರು.