ಬೆಂಗಳೂರುಸುವರ್ಣ ಗಿರಿ ಟೈಮ್ಸ್

ವಕೀಲರ ಸಮ್ಮೇಳನದಲ್ಲಿ ಹಣ ದುರ್ಬಳಕೆ: ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕರು ವಿರುದ್ಧ ಎಫ್‌ಐಆ‌ರ್, ಬಿಸಿಐನಿಂದ ತನಿಖೆ

ಬೆಂಗಳೂರು: ಮೈಸೂರಿನಲ್ಲಿ 2023ರಲ್ಲಿ ಜರುಗಿದ್ದ ರಾಜ್ಯ ವಕೀಲರ ಸಮ್ಮೇಳನದ ವೇಳೆ ಹಣಕಾಸು ದುರ್ಬಳಕೆ ನಡೆದಿದೆ ಹಾಗೂ 50 ಲಕ್ಷಕ್ಕೂ ಹೆಚ್ಚಿನ ಮೊತ್ತದ ದುರುಪಯೋಗ ನಡೆದಿದೆ ಎಂದು ರಾಜ್ಯ ವಕೀಲರ ಸಂಘದ ಸದಸ್ಯರೊಬ್ಬರು ಬೆಂಗಳೂರಿನ ವಿಧಾನಸೌಧ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಈ ದೂರನ್ನು ಆಧರಿಸಿ ಪೊಲೀಸರು ರಾಜ್ಯ ವಕೀಲರ ಪರಿಷತ್‌ನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕರು ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆ‌ರ್ ದಾಖಲಿಸಿದ್ದಾರೆ.

ರಾಜ್ಯ ವಕೀಲರ ಪರಿಷತ್ ಸದಸ್ಯರೂ ಮತ್ತು ಹೈಕೋರ್ಟ್‌ನ ಹಿರಿಯ ವಕೀಲರೂ ಆಗಿರುವ ಎಸ್. ಬಸವರಾಜ್‌ ಅವರು ಈ ದೂರು ಸಲ್ಲಿಸಿದವರು. ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಎಚ್.ಎಲ್. ವಿಶಾಲ್ ರಘು, ಉಪಾಧ್ಯಕ್ಷ ವಿನಯ ಮಂಗಳೇಕರ್, ಪರಿಷತ್‌ ವ್ಯವಸ್ಥಾಪಕ ಪುಟ್ಟೇಗೌಡ ಹಾಗೂ ಇತರರನ್ನು ಎಫ್‌ಐಆರ್‌ನಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿದೆ.

ದೂರಿನಲ್ಲಿ ಇರುವ ಅಂಶಗಳೇನು..?

ರಾಜ್ಯ ವಕೀಲರ ಪರಿಷತ್ ವತಿಯಿಂದ 2023ರ ಆಗಸ್ಟ್ 12 ಮತ್ತು 13ರಂದು ಎರಡು ದಿನಗಳ ಕಾಲ ಮೈಸೂರಿನಲ್ಲಿ ರಾಜ್ಯ ವಕೀಲರ ಸಮ್ಮೇಳನ ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಸಮ್ಮೇಳನದ ಪ್ರತಿನಿಧಿ ವಕೀಲರಿಂದ ತಲಾ 1000/- 3 2 1,16,33,000/- ದೇಣಿಗೆಯಾಗಿ ಸಂಗ್ರಹಿಸಲಾಗಿತ್ತು.

ರಾಜ್ಯ ಸರ್ಕಾರ 1.8 ಲಕ್ಷ ರೂ. ಅನುದಾನ ನೀಡಿತ್ತು. ಮತ್ತು ರಾಜ್ಯ ವಕೀಲರ ಪರಿಷತ್ತಿನಿಂದ 75 ಲಕ್ಷ ರೂ. ಬಿಡುಗಡೆ ಮಾಡಲಾಗಿತ್ತು. ಒಟ್ಟು 3.30 ಕೋಟಿ ರೂ. ಸಂಗ್ರಹವಾಗಿತ್ತು. ಈ ಹಣ ಪರಿಷತ್‌ನ ಬ್ಯಾಂಕ್ ಖಾತೆಗೆ ಜಮೆಯಾಗಿದ್ದು, ಈ ಹಣದ ಬಳಕೆಯಲ್ಲಿ ದುರುಪಯೋಗ ಆಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಆದರೆ, ಇದೊಂದು ಸುಳ್ಳು ದೂರು ಆಗಿದ್ದು, ವಕೀಲರ ಪರಿಷತ್ತಿಗೆ ಕೆಟ್ಟ ಹೆಸರು ತರುವ ಪ್ರಯತ್ನ ಆಗಿದೆ ಎಂದು ರಾಜ್ಯ ವಕೀಲರ ಪರಿಷತ್‌ನ ಅಧ್ಯಕ್ಷ ಎಚ್. ಎಲ್. ವಿಶಾಲ್ ರಘು ಅವರು ಆರೋಪಿಸಿದ್ದಾರೆ.

ಪರಿಷತ್ತು ಪಾರದರ್ಶಕವಾಗಿದ್ದು, ಸಮ್ಮೇಳನದಲ್ಲಿ ಮಾಡಲಾದ ಎಲ್ಲ ಖರ್ಚು ವೆಚ್ಚಗಳ ಲೆಕ್ಕವನ್ನು ಪರಿಷತ್ತಿನ ಕಚೇರಿಲ್ಲಿ ಇಡಲಾಗಿದ್ದು, ಯಾರು ಬಂದರೂ ಪರಿಶೀಲಿಸಬಹುದಾಗಿದೆ ಎಂದು ಹೇಳಿರುವ ಅವರು, ಕೆಲವರು ತಮಗೆ ಹಾಗೂ ಸಂಸ್ಥೆಯ ಘನತೆಗೆ ಕುಂದು ತರುವ ಉದ್ದೇಶದಿಂದ ಈ ಆರೋಪ ಮಾಡಿದ್ದಾರೆ ಎಂದು ದೂರಿದ್ದಾರೆ.

ತನಿಖೆಗೆ ಬಿಸಿಐ ಸಮಿತಿ ನೇಮಕ

ಈ ಎಲ್ಲ ಆರೋಪಗಳಿಗೆ ಸಂಬಂಧಿಸಿದಂತೆ ಭಾರತೀಯ ವಕೀಲರ ಸಂಘ(ಬಿಸಿಐ) ತನಿಖಾ ಸಮಿತಿಯನ್ನು ನೇಮಿಸಿದೆ.

ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರೂ ಆಗಿರುವ ಬಿಸಿಐ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರೂ ಆಗಿರುವ ಅಪೂರ್ವ ಕುಮಾ‌ರ್ ಶರ್ಮಾ ಅವರ ನೇತೃತ್ವದ ಮೂವರು ಸದಸ್ಯರ ಸಮಿತಿ ಈಗಾಗಲೇ ನೇಮಕವಾಗಿದೆ.

ಸಮಿತಿ ಈಗಾಗಲೇ ರಾಜ್ಯ ವಕೀಲರ ಪರಿಷತ್ತಿಗೆ ಪತ್ರವೊಂದನ್ನು ಬರೆದಿದ್ದು, ಆರೋಪಗಳಿಗೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಒಪ್ಪಿಸುವಂತೆ ಪರಿಷತ್ತಿನ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button