‘ಉರಿಯುವ ಜ್ಯೋತಿ’ ನಿರಂಕುಶ ಆಡಳಿತವನ್ನು ಸುಟ್ಟು ಬೂದಿ ಮಾಡುವ ಉದ್ಧವ್ ಶಿವಸೇನೆ ಚಿಹ್ನೆ ಬಿಡುಗಡೆ !
ಮುಂಬೈ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶಿವಸೇನೆ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ತಮ್ಮ ಪಕ್ಷದ ಚುನಾವಣಾ ಚಿಹ್ನೆ ‘ಉರಿಯುವ ಜ್ಯೋತಿ’ ದೇಶದಲ್ಲಿನ ನಿರಂಕುಶ ಆಡಳಿತವನ್ನು ಸುಟ್ಟು ಬೂದಿ ಮಾಡಲಿದೆ ಎಂದು ಮಂಗಳವಾರ ಹೇಳಿದ್ದಾರೆ.
ಪಕ್ಷದ ಚುನಾವಣಾ ಚಿಹ್ನೆ ಮತ್ತು ಅದನ್ನು ಪ್ರಚಾರ ಮಾಡಲು ಹಾಡನ್ನು ಬಿಡುಗಡೆ ಮಾಡಿದ ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಠಾಕ್ರೆ, ಸೇನೆ(ಯುಬಿಟಿ), ಎನ್‌ಸಿಪಿ (ಶರದ್ಚಂದ್ರ ಪವಾರ್) ಮತ್ತು ಕಾಂಗ್ರೆಸ್ ಒಳಗೊಂಡಿರುವ ಮಹಾ ವಿಕಾಸ್ ಅಘಾಡಿ (ಎಂವಿಎ) ಪಕ್ಷಗಳ ಜಂಟಿ ಪ್ರಣಾಳಿಕೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಈಗಾಗಲೇ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಮಹಾರಾಷ್ಟ್ರಕ್ಕೆ ಸಂಬಂಧಿಸಿದ ಅಂಶಗಳನ್ನು ಎಂವಿಎ ಜಂಟಿ ಪ್ರಣಾಳಿಕೆಯಲ್ಲಿ ಅಳವಡಿಸಲಾಗುವುದು ಎಂದು ಅವರು ತಿಳಿಸಿದರು.
“ಉರಿಯುವ ಜ್ಯೋತಿ ಚಿಹ್ನೆಯು ಮಹಾರಾಷ್ಟ್ರದ ಮೂಲೆ ಮೂಲೆಗಳನ್ನು ತಲುಪಿದೆ. ಈಗ, ಉರಿಯುವ ಜ್ಯೋತಿಯು ನಿರಂಕುಶ ಆಡಳಿತವನ್ನು ಸುಟ್ಟು ಬೂದಿ ಮಾಡಲಿದೆ” ಎಂದು ಠಾಕ್ರೆ ಹೇಳಿದರು.
ಕಳೆದ ವರ್ಷ, ಶಿವಸೇನೆ(ಯುಬಿಟಿ) ಅಂಧೇರಿ ಉಪಚುನಾವಣೆಯಲ್ಲಿ ಉರಿಯುತ್ತಿರುವ ಜೋತಿ ಚಿಹ್ನೆಯನ್ನು ಬಳಸಿಕೊಂಡು ಗೆದ್ದಿದೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.