ಸಾಮಾಜಿಕ ಸಮತೆಯಲ್ಲಿ ರಾಷ್ಟ್ರದ ಅಖಂಡತೆಯನ್ನು ರಕ್ಷಣೆ ಮಾಡಿದ ರಾಷ್ಟ್ರ ಭಕ್ತ: ಡಾ. ಬಿ.ಆರ್ ಅಂಬೇಡ್ಕರ್.
ಪ್ರಕೃತಿ ಆರಾಧನೆಯಲ್ಲಿ ಪರಮಾತ್ಮನನ್ನು ಕಂಡವರು ಸಿಂಧೂ ನದಿಯ ನಾಗರಿಕರಾದ ಭಾರತೀಯರು. ವಿಶ್ವದೈವ ಕುಟುಂಬಕಂ, ಸರ್ವೇ ಜನ: ಸುಖಿನೋ ಭವಂತು ಸರ್ವೇ ಸಂತ ನಿರಾಮಯ ಎಂಬ ವೇದೋಪನಿಷತ್ತುಗಳ ಉದಾತತ್ವದಡಿ ವಿಶ್ವಮಾನವ ಬಂಧುತ್ವವನ್ನು ಸಾರಿದವರು. ಇಂಥ ಮಹಾನ್ ಸಾಮಾಜಿಕ ಸಮತೆಯನ್ನು ಸಾರಿದ ರಾಷ್ಟ್ರದಲ್ಲಿ ಕೆಲವು ಸ್ವಾರ್ಥಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಜಾತಿಯೆಂಬ ವಿಷ ಬೀಜವನ್ನು ಬಿತ್ತಿ ಹಿಂದೂ ರಾಷ್ಟ್ರದ ಸಾಮಾಜಿಕ ಸಂರಚನೆಯನ್ನು ಧ್ವಂಸಗೊಳಿಸಿದರು. ಸ್ಪರ್ಶ, ಅಸ್ಪೃಶ್ಯ ಎಂಬ ಸಾಮಾಜಿಕ ವರ್ಗವನ್ನು ಸೃಷ್ಟಿಸಿ , ಸಾಮಾಜಿಕ ಸಂಘರ್ಷ ಮತ್ತು ಶೋಷಣೆಗೆ ಅಡಿಪಾಯ ಹಾಕಿದರು. ಇದರ ವಿರುದ್ಧ ಬಂಡೆದ್ದು ಸಾಮಾಜಿಕ ನ್ಯಾಯವನ್ನು ನೀಡಲು ಮುಂದಾದವರು ಮಹಾವೀರ ಮತ್ತು ಭಗವಾನ್ ಬುದ್ಧರು. ಶೋಷಿತ ಸಮುದಾಯಕ್ಕೆ ಪರ್ಯಾಯ ಮಾರ್ಗವನ್ನು ಈ ಮಹನೀಯರು ದಯಪಾಲಿಸಿದರು.
ತದನಂತರ ಮಹಾತ್ಮ ಬಸವೇಶ್ವರರು ಇವನ್ಯಾರವ ಇವನ್ಯಾರವ ಎಂದೆನಿಸಿದ್ದೀರಯ್ಯ ಇವ ನಮ್ಮವ ಇವ ನಮ್ಮವ ಎಂದೆನಿಸಿರಯ್ಯ ಎಂಬ ವಚನದಲ್ಲಿ ಸಾಮಾಜಿಕ ಬಾಂಧವ್ಯವನ್ನು ಮಸಿದರು. ಈ ಮಹನೀಯರ ಪ್ರಯತ್ನಗಳನ್ನು ಸಂಪ್ರದಾಯವಾದಿಗಳು ಪೂರ್ಣವಾಗಿ ಗಟ್ಟಿಗೊಳಲು ಬಿಡಲಿಲ್ಲ. ಪರಿಣಾಮವಾಗಿ ಇಸ್ಲಾಂ ಮತ್ತು ಕ್ರೈಸ್ತ ಧರ್ಮ ಭಾರತದಲ್ಲಿ ಪ್ರವೇಶ ಮಾಡಿ ಶೋಷಿತ ಸಮುದಾಯವನ್ನು ತನ್ನಡೆ ಸೆಳೆದುಕೊಂಡಿತ್ತು.
ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಈ ನಾಡಿನಲ್ಲಿ ಜನ್ಮ ತಾಳಿದವರೇ ಮಹಾನ್ ಚೇತನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಶೋಷಿತ ಸಮುದಾಯದಲ್ಲಿ ಹುಟ್ಟಿ, ಶೋಷಣೆಯನ್ನು ಅನುಭವಿಸುತ್ತಾ, ಇಡೀ ವಿಶ್ವವೇ ಬೆರಗಾಗುವಂತಹ ಜ್ಞಾನಿಯಾಗಿ ಬೆಳೆದರು. ವಿಶ್ವಗುರು ಭಾರತ ಎಂಬ ವಿಚಾರವನ್ನು ತಮ್ಮ ಸಾಧನೆಯ ಮೂಲಕ ಮತ್ತೊಮ್ಮೆ ಪ್ರತಿಷ್ಠಾಪಿಸಿದರು. ಭಾರತದಲ್ಲಿನ ಸಾಮಾಜಿಕ ಕೊಳಕುಗಳನ್ನು ತೊಳೆದು, ಜಾತಿ ರಹಿತ ಸಮಾಜವನ್ನು ಕಟ್ಟಲು ಮುಂದಾದರು. ಅದು ಅಸಾಧ್ಯವೆಂದು ಅರಿತ ನಂತರ, “ಹಿಂದುವಾಗಿ ಹುಟ್ಟಿರುವೆ ಆದರೆ ಹಿಂದುವಾಗಿ ಸಾಯಿಲಾರೆ” ಎಂದು ಸಾರಿದರು. ಈ ಘೋಷಣೆಯ ನಂತರ ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಈ ಧರ್ಮಗಳ ಧರ್ಮ ಗುರುಗಳು ಮತ್ತು ಹೈದರಾಬಾದಿನ ನಿಜಾಮ ತಮ್ಮ ಧರ್ಮವನ್ನು ಸ್ವೀಕರಿಸಲು ಅಂಬೇಡ್ಕರ್ ಅವರನ್ನು ಮನವೊಲಿಸಿದರು. ನೂರಾರು ಕೋಟಿಗಳ ಹಣದ ಅಮಿಷವನ್ನು ನೀಡಿದರು. ಆದರೆ ಬಾಬಾ ಸಾಹೇಬ್ರವರು ಸಕಲ ಧರ್ಮಗಳ ಸಾರವನ್ನು ಅರಿತವರಾಗಿದ್ದರು. ಅವುಗಳ ನೈಜ ಉದ್ದೇಶವನ್ನು ಬಲ್ಲವರಾಗಿದ್ದರು.
ಆದ್ದರಿಂದ ಆ ಧರ್ಮಗಳನ್ನು ಸ್ವೀಕರಿಸಿದೆ, ಭಾರತದಲ್ಲಿಯೇ ಹುಟ್ಟಿದ, ಮನುಷ್ಯ ಪ್ರೇಮ ಸಾರಿದ ರಾಷ್ಟ್ರದ ಅಖಂಡತೆಗೆ ಧಕ್ಕೆ ತರದ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಇಂದು ಭಾರತ್ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ನಾವು, ಒಂದು ವೇಳೆ ಬಾಬಾ ಸಾಹೇಬರು ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿದ್ದರೆ ಇಂದು ಭಾರತದ ಸ್ಥಿತಿ ಏನಾಗಬಹುದಿತ್ತು ಎಂಬುದನ್ನು ಕಲ್ಪಿಸಿಕೊಳ್ಳಬೇಕಿದೆ.
ಸಾಮಾಜಿಕ ಸಮತೆಯಲ್ಲಿ ರಾಷ್ಟ್ರದ ಅಖಂಡತೆಯನ್ನು ಕಾಪಾಡುವ ವಿಚಾರದಲ್ಲಿ ಅವರು ಎಂದೆಂದೂ ರಾಜಿ ಆಗಲಿಲ್ಲ ಎಂಬ ವಿಚಾರವನ್ನು ನಾವುಕೃತಜ್ಞತೆಯಿಂದ, ಧನ್ಯತೆಯಿಂದ ಸ್ಮರಿಸಬೇಕಿದೆ. ಈ ಹಿನ್ನಲೆಯಲ್ಲಿ ಅವರನ್ನು ಅರಿಯಬೇಕಿದೆ. ದೇಶದ ರಕ್ಷಣೆ ಹೋರುವ ಇಂದಿನ ಮತ್ತು ಮುಂದಿನ ಪೀಳಿಗೆಗಳಿಗೆ ಈ ವಿಚಾರಗಳನ್ನು ಹೇಳಬೇಕಿದೆ. ಹಾಗೆ ಆಗಲೆಂದು ಆಶಿಸುತ್ತಾ ಬಾಬಾ ಸಾಹೇಬರಿಗೆ ನಮನ ಸಲ್ಲಿಸುವೆ.
ಡಾಕ್ಟರ್ ಎನ್ ಎಸ್ ಜಾದವ್, ಉಪನ್ಯಾಶಕರು ಮತ್ತು ಲೇಖಕರು, ಕಲಬುರ್ಗಿ.