ದೇಶದ 543 ಲೋಕಸಭಾ ಕ್ಷೇತ್ರಗಳಿಗೆ ಒಟ್ಟು 7 ಹಂತಗಳಲ್ಲಿ ಚುನಾವಣೆ: ಚುನಾವಣಾ ಆಯುಕ್ತ ರಾಜೀವ್ ಕುಮಾರ್
ನವದೆಹಲಿ: ದೇಶದ 543 ಲೋಕಸಭಾ ಕ್ಷೇತ್ರಗಳಿಗೆ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್ 19 ರಂದು ಮೊದಲ ಹಂತದ ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಘೋಷಿಸಿದ್ದಾರೆ.
ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುತ್ತಿರುವ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ದಕ್ಷಿಣ ಕರ್ನಾಟಕದಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯಲಿದ್ದು, ಉತ್ತರ ಕರ್ನಾಟಕ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶದಲ್ಲಿ 7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಏಪ್ರಿಲ್ 19ರಂದು ಮೊದಲ ಹಂತ, ಏಪ್ರಿಲ್u 26ರಂದು ಎರಡನೇ ಹಂತ, ಮೇ 7ರಂದು ಮೂರನೇ ಹಂತ, ಮೇ 20 ರಂದು ನಾಲ್ಕನೇ ಹಂತ, ಮೇ 25 ರಂದು ಐದನೇ ಹಂತ, ಮೇ 25 ರಂದು ಆರನೇ ಹಂತ, ಜೂನ್ 1 ರಂದು ಏಳನೇ ಹಂತದ ಮತದಾನ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ, ಫಲಿತಾಂಶ ಪ್ರಕಟಗೊಳ್ಳಲಿದೆ.
ಚುನಾವಣೆಯಲ್ಲಿ ಹಿಂಸೆಗೆ ಅವಕಾಶ ನೀಡಲ್ಲ: ರಾಜೀವ್ ಕುಮಾರ್: ಎಲ್ಲಾ ಕಡೆ ಚೆಕ್‌ಪೋಸ್ಟ್ ಇರಲಿವೆ, ಡೋನ್ ಮೂಲಕ ಕಣ್ಣಾವಲು ಇರಿಸಲಾಗುವುದು. 24 ಗಂಟೆಗಳ ಕಂಟ್ರೋಲ್ ರೂಂಗಳು ಕರ್ತವ್ಯ ನಿರ್ವಹಿಸಲಿವೆ. ಸಿಆರ್ ಪಿಎಫ್ ತುಕಡಿಗಳನ್ನು ನಿಯೋಜನೆ ಮಾಡಲಾಗುವುದು. ರೌಡಿಶೀಟರ್‌ಗಳ ಮೇಲೂ ತೀವ್ರ ನಿಗಾ ಇಡಲಾಗುವುದು. ಅಂತರಾಷ್ಟ್ರೀಯ ಗಡಿಯಲ್ಲೂ ಪ್ರೋಣ್ ಮೂಲಕ ಕಣ್ಣಾವಲು ಇರಿಸಲಾಗುವುದು ಎಂದರು.
ಆ್ಯಪ್ ಮೂಲಕ ತಮ್ಮ ಅಭ್ಯರ್ಥಿಗಳ ಮಾಹಿತಿ ಲಭ್ಯ ಇರಲಿದೆ. ಅಭ್ಯರ್ಥಿಗಳ ಅಪರಾಧ ಪ್ರಕರಣಗಳ ಕುರಿತು ಮಾಹಿತಿ ಆ್ಯಪ್ ನಲ್ಲಿರಲಿದೆ. ಚುನಾವಣಾ ಅಕ್ರಮಗಳನ್ನು ಮತದಾರ ಬಯಲು ಮಾಡಬಹುದು. ಆ್ಯಪ್ ಮೂಲಕ ಅಕ್ರಮದ ಫೋಟೋ, ವಿಡಿಯೋ ಅಪ್ಲೋಡ್ ಮಾಡಬಹುದು. ಕೂಡಲೇ ಅಕ್ರಮ ಎಸಗುವ ಅಭ್ಯರ್ಥಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ರಾಜೀವ್ ಕುಮಾರ್ ಹೇಳಿದರು.
ಮತಗಟ್ಟೆಗಳಲ್ಲಿ ಹಿಂಸಾಚಾರ ನಡೆದರೆ ಜಾಮೀನು ರಹಿತ ಕೇಸ್: ಕ್ರಿಮಿನಲ್ ಹಿನ್ನೆಲೆ ಇರುವ ವ್ಯಕ್ತಿಗಳು ಇದ್ದರೆ ಮಾಹಿತಿ ನೀಡಿ, ಸ್ಥಳೀಯ ಪತ್ರಿಕೆಗಳು ಮತ್ತು ಟಿವಿಗಳಲ್ಲಿ ಮಾಹಿತಿ ನೀಡಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದರು. 11 ರಾಜ್ಯಗಳ ಚುನಾವಣೆಯಲ್ಲಿ 3400 ಕೋಟಿ ರೂ. ಸೀಜ್ ಮಾಡಲಾಗಿದೆ. ಚುನಾವಣೆ ವೇಳೆ ವಶಕ್ಕೆ 3400 ಕೋಟಿ ರೂಪಾಯಿ ಸೀಜ್ ಮಾಡಲಾಗಿದೆ. ಮತಗಟ್ಟೆಗಳಲ್ಲಿ ಹಿಂಸಾಚಾರ ನಡೆದರೆ ಜಾಮೀನು ರಹಿತ ಕೇಸ್ ದಾಖಲಿಸಲಾಗುವುದು ಎಂದರು.
ರೈಲು ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ತಪಾಸಣೆ: ರೈಲ್ವೆ ಸ್ಟೇಷನ್, ಏರ್‌ಪೋರ್ಟ್‌ಗಳಲ್ಲಿ ತಪಾಸಣೆ ನಡೆಯಲಿದೆ. ಹೆಲಿಕಾಪ್ಟರ್, ಖಾಸಗಿ ವಿಮಾನಗಳಲ್ಲೂ ಕೂಡ ತಪಾಸಣೆ ನಡೆಸಲಾಗುವುದು. ಎಲ್ಲಾ ವಾಹನಗಳನ್ನು ಕೂಡ ತಪಾಸಣೆ ನಡೆಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದರು.
ವಿಭಜಿಸಲು ಪ್ರೇರೇಪಿಸುವ ರಾಜಕೀಯ ಭಾಷಣ ಮಾಡುವಂತಿಲ್ಲ: ವಿಭಜಿಸಲು ಪ್ರೇರೇಪಿಸುವ ರಾಜಕೀಯ ಭಾಷಣ ಮಾಡುವಂತಿಲ್ಲ ಎಂದು ರಾಜಕೀಯ ಪಕ್ಷಗಳಿಗೆ ಸಲಹೆ ನೀಲಾಗಿದೆ. ವಿಷಯ ಆಧಾರಿತ ಪ್ರಚಾರ ಮಾಡಬೇಕು. ದ್ವೇಷದ ಭಾಷಣಗಳಿಗೆ ಅವಕಾಶವಿಲ್ಲ. ಯಾವುದೇ ಜಾತಿ ಅಥವಾ ಧಾರ್ಮಿಕ ವಿಷಯದ ಮೂಲಕ ಮತಯಾಚನೆ ಮಾಡುವಂತಿಲ್ಲ. ಖಾಸಗಿ ಜೀವನದ ಯಾವುದೇ ಅಂಶವನ್ನು ಟೀಕಿಸುವುದಿಲ್ಲ. ಪರಿಶೀಲಿಸದ ಮತ್ತು ತಪ್ಪುದಾರಿಗೆಳೆಯುವ ಜಾಹೀರಾತು ಪ್ರಕಟಿಸಬಾರದು. ಜಾಹೀರಾತುಗಳನ್ನು ಸುದ್ದಿಯಾಗಿ ನೀಡುವಂತಿಲ್ಲ. ಪ್ರತಿಸ್ಪರ್ಧಿಗಳನ್ನು ನಿಂದಿಸುವ/ ಅವಮಾನಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೇಲೆ ನಿರ್ಬಂಧ ಹೇರಲಾಗುವುದು. ಸ್ಟಾರ್ ಪ್ರಚಾರಕರು ಪ್ರಚಾರದ ಗೌರವ ಕಾಪಾಡಿಕೊಳ್ಳಬೇಕು ಎಂದರು.
ಅನುಮಾನಾಸ್ಪದ ವಹಿವಾಟುಗಳ ಬಗ್ಗೆ ಮಾಹಿತಿ ನೀಡಬೇಕು. ಎಲ್ಲ ಬ್ಯಾಂಕ್‌ಗಳು ದೈನಂದಿನ ವರದಿಗಳನ್ನು ಕಳುಹಿಸಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನಿರ್ದೇಶ ನೀಡಿದರು.
ಸುಳ್ಳು ಸುದ್ದಿಗಳ ಮೇಲೆ ನಿಗಾ: ಸಾಮಾಜಿಕ ಜಾಲತಾಣದಲ್ಲಿ ಫೇಕ್ ಸುದ್ದಿಗಳ ಮೇಲೂ ನಿಗಾ ಇಡಲಾಗುವುದು ಎಂದು ರಾಜೀವ್ ಕುಮಾರ್ ಹೇಳಿದರು. ಅಭ್ಯರ್ಥಿಗಳನ್ನು ಬಗ್ಗೆ ಮಾತನಾಡಲು ಅವಕಾಶವಿದೆ. ಆದರೆ ಸುಳ್ಳು ಸುದ್ದಿಗಳ ಮೂಲಕ ತೆಗಳಲು ಅವಕಾಶವಿಲ್ಲ ಎಂದರು.
ಅಭ್ಯರ್ಥಿಗಳು ಶತ್ರುಗಳ ರೀತಿ ವರ್ತಿಸಬಾರದು: ಪ್ರಚಾರದ ವೇಳೆ ಅಭ್ಯರ್ಥಿಗಳು ಗೌರವ ಕಾಪಾಡಿಕೊಳ್ಳಬೇಕು. ದ್ವೇಷ ಭಾಷಣ ಮಾಡಬಾರದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದರು. ಅಭ್ಯರ್ಥಿಗಳು ಶತ್ರುಗಳ ರೀತಿ ವರ್ತಿಸಬಾರದು. ಚುನಾವಣೆಯ ಶತ್ರುಗಳು ಮುಂದೆ ಸ್ನೇಹಿತರಾಗಬಹದು. ಅದಕ್ಕೆ ಉದಾಹರಣೆ ಇದೆ ಎಂದರು.
ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣೆ ನಡೆಯಲಿದೆ. ಏ.26 ಹಾಗೂ ಮೇ.7 ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣೆ ಆಯುಕ್ತ ರಾಜೀವಕುಮಾರ ಘೋಷಣೆ ಮಾಡಿದರು