ಕೇರಳದ ಮಾಜಿ ಸಿಎಂ ದಿ.ಕರುಣಾಕರನ್ ಪುತ್ರಿ ಪದ್ಮಜಾ ಬಿಜೆಪಿ ಸೇರ್ಪಡೆ!

ತಿರುವನಂತಪುರ: ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ಪ್ರಮುಖ ಕಾಂಗ್ರೆಸ್ ನಾಯಕರಾಗಿದ್ದ ದಿವಂಗತ ಕೆ.ಕರುಣಾಕರನ್ ಅವರ ಪುತ್ರಿ ಪದ್ಮಜಾ ವೇಣುಗೋಪಾಲ್ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಹೊಸದಿಲ್ಲಿಯಲ್ಲಿ ಗುರುವಾರ ಬಿಜೆಪಿಯ ಮುಖ್ಯ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
ಬಿಜೆಪಿಯ ಕೇರಳ ಉಸ್ತುವಾರಿ ಹಾಗೂ ಮಾಜಿ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಆನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪದ್ಮಜಾ ಅವರು ಕಾಂಗ್ರೆಸ್ ನಲ್ಲಿ ನಾಯಕತ್ವದ ಕೊರತೆಯಿದೆ ಹಾಗೂ ಕಳೆದ ಹಲವು ವರ್ಷಗಳಿಂದ ಆ ಪಕ್ಷದ ಬಗ್ಗೆ ಅಸಂತುಷ್ಟಳಾಗಿದ್ದೇನೆ ಎಂದರು.
ಈ ಮಧ್ಯೆ ವಡಕರದ ಕಾಂಗ್ರೆಸ್ ಸಂಸದ ಹಾಗೂ ಪದ್ಮಜಾ ಸಹೋದರ ಕೆ. ಮುರಳೀಧರನ್ ಅವರು ತನ್ನ ಸೋದರಿಯ ನಡೆಯು, ವಿಶ್ವಾಸದ್ರೋಹದ್ದಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಪದ್ಮಜಾರ ಸೇರ್ಪಡೆಯಿಂದ ಬಿಜೆಪಿಗೆ ಎಳ್ಳಷ್ಟೂ ಲಾಭವಾಗದು. ಕೇರಳದ ಎಲ್ಲೆಡೆಯೂ ನಾವು ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಲಿದ್ದೇವೆ. ಪದ್ಮಜಾ ಎಸಗಿದ ದ್ರೋಹಕ್ಕೆ ಇವಿಎಂಗಳ ಮೂಲಕ ಉತ್ತರ ದೊರೆಯಲಿದೆ” ಎಂದು ಮರುಳೀಧರನ್ ಹೇಳಿದ್ದಾರೆ.