ನಗರಸಭೆಯಲ್ಲಿ ಸರ್ಕಾರಿ ದಾಖಲೆ ತಿದ್ದಿ ಅಕ್ರಮ: ಸಿಬ್ಬಂದಿಗಳ ವಿರುದ್ಧ FIR ದಾಖಲು!!
ಮೈಸೂರು: ಸರ್ಕಾರಿ ದಾಖಲೆಗಳನ್ನು ತಿದ್ದಿ ಅಕ್ರಮ ಎಸಗಿದ ಹಿನ್ನೆಲೆ, ಪೌರಾಯುಕ್ತ, ಕಂದಾಯ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಸರ್ಕಾರಿ ದಾಖಲೆಗಳನ್ನು ತಿದ್ದಿ ಕೆಲವು ಕಡತಗಳನ್ನು ನಾಪತ್ತೆ ಮಾಡಲಾಗಿದೆ. ನಿವೇಶನಗಳ ಖಾತೆ ಮಾಡುವ ವೇಳೆ ನಿಯಮಗಳನ್ನು ಗಾಳಿಗೆ ತೂರಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಲಾಗಿದೆ. ಈ ಹಿನ್ನೆಲೆ ಇಬ್ಬರು ಅಧಿಕಾರಿಗಳ ವಿರುದ್ದ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಹಾಲಿ ಪೌರಾಯುಕ್ತ ನಂಜುಂಡಸ್ವಾಮಿ ದೂರು ಹಿನ್ನೆಲೆ ನಗರಸಭೆ ಹಿಂದಿನ ಪೌರಾಯುಕ್ತ ಎಂ.ರಾಜಣ್ಣ ಹಾಗೂ ವಿಷಯ ನಿರ್ವಾಹಕ ಡಿ.ಎನ್.ನರಸಿಂಹಮೂರ್ತಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನಂಜನಗೂಡು ತಾಲೂಕು ದೇಬೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಭಾರೀ ಅಕ್ರಮ ನಡೆದಿದೆ. ದೇವೀರಮ್ಮನಹಳ್ಳಿ ಸರ್ವೆ ನಂ 58,59 ರ ವಿಸ್ತೀರ್ಣ 3.16 ಬಿ.ಬಸಪ್ಪ ಎಂಬುವರಿಗೆ ಸೇರಿದೆ. ಕೈಗಾರಿಕಾ ಉದ್ದೇಶಕ್ಕಾಗಿ ಉಪವಿಭಾಗಾಧಿಕಾರಿಗಳು ಅನ್ಯಕ್ರಾಂತ ಮಂಜೂರು ಮಾಡಿದ್ದಾರೆ. ನಂತರ ವಸತಿ ಬಡಾವಣೆ ನಿರ್ಮಿಸಲು ಬದಲಾವಣೆ ಸಹ ಆದೇಶ ಮಾಡಿದ್ದಾರೆ. ವಸತಿ ಮನೆ ನಿರ್ಮಿಸಬೇಕಿದ್ದಲ್ಲಿ ಮೈಸೂರು- ನಂಜನಗೂಡು ಯೋಜನಾ ಪ್ರಾಧಿಕಾರದಿಂದ ಅಧಿಕೃತ ಬಡಾವಣೆ ನಕ್ಷೆ ಅನುಮೋದನೆ ಪಡೆಯಬೇಕಿತ್ತು. ಸಕ್ಷಮ ಪ್ರಾಧಿಕಾರದಿಂದ ನಕ್ಷೆ ಅನುಮೋದನೆ ಆಗಿಲ್ಲ. ಹಿಂದಿನ ಪೌರಾಯುಕ್ತ ಎಂ.ರಾಜಣ್ಣ ಹಾಗೂ ವಿಷಯ ನಿರ್ವಾಹಕರಾದ ಡಿ.ಎನ್. ನರಸಿಂಹಮೂರ್ತಿ ಸಂಖ್ಯೆ 106 ರ ಆಸ್ತಿ ವಹಿಯಲ್ಲಿ ನಿವೇಶನ ಸಂಖ್ಯೆ 1 ರಿಂದ 48 ರವರೆಗೆ ವಿವಿಧ ಅಸೆಸ್ ಮೆಂಟ್ಗಳಲ್ಲಿ ವಿವಿಧ ಅಳತೆಗಳನ್ನು ನಮೂದಿಸಿ ಗಂಗಮ್ಮ ಎಂಬುವರ ಹೆಸರಿಗೆ ಖಾತೆ ದಾಖಲಿಸಿದ್ದಾರೆ.
ಇವೆಲ್ಲಾ ಪ್ರಕ್ರಿಯೆಗಳನ್ನು ನಡೆಸುವಾಗ ಭಾರಿ ಅಕ್ರಮ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಕ್ರಮಗಳ ಬಗ್ಗೆ ಪರಿಶೀಲನೆ ನಡೆಸುವ ವೇಳೆ ಕೆಲವೆಡೆ ಹೆಸರುಗಳನ್ನು ಖಾಲಿ ಬಿಡಲಾಗಿದೆ. ಕೆಲವೆಡೆ ತಿದ್ದಿ ಬರೆದಿದ್ದಾರೆ. ಮತ್ತೆ ಕೆಲವು ಕಡತಗಳೇ ನಾಪತ್ತೆಯಾಗಿವೆ. ಈ ಹಿನ್ನಲೆ ಮೈಸೂರು ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಆದೇಶದಂತೆ ದೂರು ನೀಡಲಾಗಿದೆ.