ಬಿಜೆಪಿ ನಾಯಕರ ವಿರುದ್ಧ ಸುಳ್ಳು ಆರೋಪ: ಆಪ್ ಸಂಸದನಿಗೆ ದಂಡ
ಲಕ್ನೋ: ಬಿಜೆಪಿ ಹಿರಿಯ ನಾಯಕರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿರುವುದಕ್ಕೆ ಆಮ್ ಆದ್ಮಿ ಪಕ್ಷದ ನಾಯಕ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಗೆ ಲಕ್ನೋ ಜಿಲ್ಲಾ ನ್ಯಾಯಾಲಯ 1 ಲಕ್ಷ ರೂಪಾಯಿ ದಂಡ ವಿಧಿಸಿದೆ
ಬಿಜೆಪಿ ನಾಯಕ ಮತ್ತು ರಾಜ್ಯ ಸರ್ಕಾರದ ಮಾಜಿ ಸಚಿವ ಮಹೇಂದ್ರ ಕುಮಾರ್ ಸಿಂಗ್ ವಿರುದ್ಧ ಸುಳ್ಳು ಆರೋಪ ಮಾಡಿರುವ ಸಂಜಯ್ ಸಿಂಗ್ ಅವರನ್ನು ತಪ್ಪಿತಸ್ಥರೆಂದು ತೀರ್ಪು ನೀಡಿರುವ ಲಕ್ನೋ ಜಿಲ್ಲಾ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರು, ಮಹೇಂದ್ರ ಸಿಂಗ್ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿರುವ ಎಲ್ಲಾ ವೀಡಿಯೊ ದೃಶ್ಯಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಸಂಜಯ್ ಸಿಂಗ್ ಅವರಿಗೆ ಸೂಚಿಸಿದೆ.
ಮುಂದಿನ ಎರಡು ತಿಂಗಳೊಳಗೆ ಎಎಪಿ ನಾಯಕ ಸಂಜಯ್ ಸಿಂಗ್ ಅವರು ದಂಡವನ್ನು ಪಾವತಿಸಲು ವಿಫಲವಾದರೆ, ತೀರ್ಪಿನ ದಿನಾಂಕದಿಂದ ಆ ಮೊತ್ತಕ್ಕೆ ಶೇಕಡಾ ಆರು ದರದಲ್ಲಿ ಬಡ್ಡಿಯನ್ನು ಪಡೆಯಲಾಗುವುದು ಎಂದು ನ್ಯಾಯಾಲಯವು ತಿಳಿಸಿದೆ.
ಉತ್ತರಪ್ರದೇಶ ಯೋಗಿ ಆದಿತ್ಯನಾಥ್ ಸರ್ಕಾರದ ಮೊದಲ ಅಧಿಕಾರಾವಧಿಯಲ್ಲಿ ಜಲಶಕ್ತಿ ಇಲಾಖೆಯಲ್ಲಿ ಮಹೇಂದ್ರ ಸಿಂಗ್ ಕ್ಯಾಬಿನೆಟ್ ಸಚಿವರಾಗಿದ್ದರು.