ಗುಜರಾತ್ಸುವರ್ಣ ಗಿರಿ ಟೈಮ್ಸ್

ಶಾಸಕ ಸ್ಥಾನಕ್ಕೆ ಎಎಪಿಯ ಭೂಪೇಂದ್ರ ಭಯಾನಿ ರಾಜೀನಾಮೆ !!

ಅಹಮದಾಬಾದ್‌: ಗುಜರಾತ್‌ನ ಎಎಪಿ ಶಾಸಕ ಭೂಪೇಂದ್ರ ಭಯಾನಿ ಅವರು ವಿಧಾನಸಭೆ ಸದಸ್ಯತ್ವಕ್ಕೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ. ಯಾವುದೇ ಸಮಯದಲ್ಲಿ ಅವರು ಆಡಳಿತಾರೂಢ ಬಿಜೆಪಿಗೆ ಸೇರುವ ಸಂಭವ ಇದೆ.

ವಿಧಾನಸಭೆ ಚುನಾವಣೆಯಲ್ಲಿ ಐದು ಸ್ಥಾನಗಳನ್ನು ಜಯಿಸಿದ ಒಂದು ವರ್ಷದ ಬಳಿಕ ಎಎಪಿಯ ಶಾಸಕರೊಬ್ಬರು ರಾಜೀನಾಮೆ ನೀಡಿರುವುದು ಪಕ್ಷಕ್ಕೆ ಹಿನ್ನಡೆ ಆದಂತೆ ಆಗಿದೆ. ಗಾಂಧಿನಗರದಲ್ಲಿ ಸ್ಪೀಕರ್‌ ಶಂಕರ್‌ ಚೌಧರಿ ಅವರಿಗೆ ಭೂಪೇಂದ್ರ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ‘ರಾಜೀನಾಮೆ ಅಂಗೀಕಾರ ಆಗಿದೆ’ ಎಂದು ವಿಧಾನಸಭೆ ಕಾರ್ಯದರ್ಶಿ ಡಿ.ಎಂ. ಪಟೇಲ್‌ ಹೇಳಿದ್ದಾರೆ.

ರಾಜೀನಾಮೆ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಜನರ ಸೇವೆಗೆ ಎಎಪಿ ಸರಿಯಾದ ವೇದಿಕೆಯಲ್ಲ ಎಂದರು.

‘ನಾನು ಶೀಘ್ರವೇ ಬಿಜೆಪಿ ಸೇರುತ್ತೇನೆ. ಮೂಲತಃ ನಾನು ಆ ಪಕ್ಷಕ್ಕೇ ಸೇರಿದ್ದೇನೆ. ಶಾಸಕನಾಗುವ ಮೊದಲು 22 ವರ್ಷಗಳ ಕಾಲ ಆ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ಕೇಂದ್ರ ನಾಯಕತ್ವ ಬಯಸಿದರೆ ಉಪ ಚುನಾವಣೆಗೆ ಸ್ಪರ್ಧಿಸುತ್ತೇನೆ. ಎಎಪಿ ತ್ಯಜಿಸಲು ನನಗೆ ಯಾವುದೇ ಒತ್ತಡ ಇರಲಿಲ್ಲ’ ಎಂದು ಹೇಳಿದರು.

ಎಎಪಿ ಗುಜರಾತ್‌ ಘಟಕದ ಅಧ್ಯಕ್ಷ ಈಸುದಾನ್‌ ಗಢವಿ ಅವರು, ‘ಬಿಜೆಪಿಯು 156 ಸ್ಥಾನಗಳನ್ನ ಹೊಂದಿದ್ದರೂ ಪಕ್ಷ ಸೇರುವಂತೆ ನಮ್ಮ ಶಾಸಕರನ್ನು ಒತ್ತಾಯಿಸುತ್ತಿರುವುದು ವಿಷಾದನೀಯ’ ಎಂದು ಪ್ರತಿಕ್ರಿಯಿಸಿದರು.

‘ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಬದಲು ಬಿಜೆಪಿಯು ನಮ್ಮ ಐದು ಶಾಸಕರಿಗೆ ಪಕ್ಷ ಬಿಡುವಂತೆ ಮತ್ತು ತಮ್ಮ ಪಕ್ಷ ಸೇರುವಂತೆ ಒತ್ತಡ ಹೇರುತ್ತಿದೆ. ಎಪಿಪಿ ಅಭ್ಯರ್ಥಿಗೆ ಮತ ನೀಡಿದ ವಿಸಾವದರ್‌ ಕ್ಷೇತ್ರದ ಜನರ ಕ್ಷಮೆ ಕೋರುತ್ತೇನೆ. ಅವರೀಗ ಮತ್ತೊಂದು ಚುನಾವಣೆ ಎದುರಿಸಬೇಕಿದೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ‘ನಮ್ಮ ಶಾಸಕ ಭೂಪೇಂದ್ರ ಅವರಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಒಂದು ವರ್ಷದ ಹಿಂದೆ ಅವರ ಜಯದ ಬಳಿಕವೇ ಬಿಜೆಪಿ ಅವರನ್ನು ಸೆಳೆಯಲು ಯತ್ನಿಸಿತ್ತು’ ಎಂದರು.

ಬಿಜೆಪಿ ನಾಯಕರು ಪ್ರತಿ ದಿನವೂ ಎಎಪಿಯ ಐವರು ಶಾಸಕರನ್ನು ಭೇಟಿ ಮಾಡಿ ಪಕ್ಷ ಸೇರಲು ಒತ್ತಡ ಹೇರುತ್ತಿದ್ದರು. ಪ್ರಜಾಪ್ರಭುತ್ವವನ್ನು ಕೊನೆಗಾಣಿಸಲು ಬಿಜೆಪಿ ಬಯಸಿದೆ’ ಎಂದು ಅವರು ಆರೋಪಿಸಿದರು.

Related Articles

Leave a Reply

Your email address will not be published. Required fields are marked *

Back to top button