ಬೆಳಗಾವಿಸುವರ್ಣ ಗಿರಿ ಟೈಮ್ಸ್

ವಕೀಲನ ಮೇಲೆ ಹಲ್ಲೆ ಖಂಡಿಸಿ ಬೃಹತ್ ಪ್ರತಿಭಟನೆ

ಬೆಳಗಾವಿ: ಚಿಕ್ಕಮಗಳೂರಿನ ವಕೀಲ ಪ್ರೀತಮ್ ಎಂಬವರ ಮೇಲೆ ಪೊಲೀಸರು ನಡೆಸಿದ್ದಾರೆ ಎನ್ನಲಾದ ಮಾರಣಾಂತಿಕ ಹಲ್ಲೆ ಖಂಡಿಸಿ ಬೆಳಗಾವಿಯ ನ್ಯಾಯವಾದಿಗಳು ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಚನ್ನಮ್ಮನ ವೃತ್ತದ ಬಳಿ ನೂರಾರು ಸಂಖ್ಯೆಯಲ್ಲಿ ಆಗಮಿಸಿದ ವಕೀಲರು ಮಾನವ ಸರಪಳಿ ನಿರ್ಮಿಸಿ 1 ಗಂಟೆಗಳ ಕಾಲ ರಸ್ತೆ ತಡೆದು ನಡೆಸಿ ಪೊಲೀಸರ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ನ್ಯಾಯವಾದಿಗಳು ಮಾತನಾಡಿ, ಯುವ ವಕೀಲರ ಮೇಲೆ ನಡೆದ ಹಲ್ಲೆ ಖಂಡನೀಯ, ವಕೀಲರು ಸಮಾಜದ ಅಭಿರಕ್ಷಕರು, ಇವರನ್ನೇ ಪೊಲೀಸ್‌ ಇಲಾಖೆಯವರು ಹೀಗೆ ನಡೆಸಿಕೊಂಡರೆ, ಇನ್ನು ಸಾಮಾನ್ಯ ಜನರ ಗತಿ ಏನು ಎಂದು ಪ್ರಶ್ನಿಸಿದರು. ಪ್ರಕರಣ ದಾಖಲಾದರೂ ಕೂಡ ಆರೋಪಿಗಳನ್ನು ಬಂಧಿಸದೇ ಇರುವುದು ಸರಿಯಲ್ಲ ಎಂದರು.

ಘಟನೆಯ ಗಂಭೀರತೆ ಅರಿತ ರಾಜ್ಯ ಸರ್ಕಾರ ಆರೋಪಿಗಳನ್ನು ಸೇವೆಯಿಂದ ಅಮಾನತು ಮಾಡಿದೆ. ಆದರೆ ಇನ್ನೂ ಕೂಡ ಅರೋಪಿಗಳ ಬಂಧನವಾಗಿಲ್ಲ, ತಕ್ಷಣ ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವುದು ರಾಜ್ಯದ ವಕೀಲರ ಆಗ್ರಹವಾಗಿದೆ ಎಂದರು.

ಶೀಘ್ರವೇ ಸರ್ಕಾರ ವಕೀಲರಿಗಾಗಿ ವಕೀಲರ ರಕ್ಷಣಾ ಕಾಯಿದೆ ಜಾರಿಗೆ ತರಬೇಕು. ಅಲ್ಲದೆ ಚಿಕ್ಕಮಗಳೂರು ನಗರ ಪೊಲೀಸರು ಕ್ಷುಲ್ಲಕ ಕಾರಣಕ್ಕೆ ವಕೀಲನ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ಕ್ರಮ ಸರಿಯಲ್ಲ. ಆದ್ದರಿಂದ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು
ಒತ್ತಾಯಿಸಿದರು.

ಟ್ರಾಫಿಕ್ ಸಮಸ್ಯೆಗೆ ಜನರ ಆಕ್ರೋಶ: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದ ನಡೆಯುತ್ತಿರುವುದರಿಂದ ಸರಕಾರದ ಸಚಿವರು, ವಿಪಕ್ಷ ನಾಯಕರು ಹಾಗೂ ಕಾಂಗ್ರೆಸ್, ಬಿಜೆಪಿ ರಾಜ್ಯಾಧ್ಯಕ್ಷರು ತೆರಳು ಮಾರ್ಗದಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆಯಿಂದ ಹಿಡಿಶಾಪ ಹಾಕಿದ್ದ ಜನರಿಗೆ ವಕೀಲರ ಪ್ರತಿಭಟನೆಯಿಂದಲೂ ಚನ್ನಮ್ಮ ವೃತ್ತದಲ್ಲಿ ಕಿರಿಕಿರಿಯಾಯಿತು. ಕಾನೂನು ಪಾಠ ಹೇಳುವ ವಕೀಲರೇ ಸಾರ್ವಜನಿಕರ ಎದುರು ಈ ರೀತಿ ನಡೆದುಕೊಳ್ಳುವುದು ಎಷ್ಟು ಸರಿ ಎಂದು ಸಾರ್ವಜನಿಕರು ವಕೀಲರ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಲ್ಲಿ ದ್ವಿಚಕ್ರ ವಾಹನಕಾರು ಹಾಗೂ ಸಾರ್ವಜನಿಕರ ಜೊತೆ ವಕೀಲರ ವಾಗ್ವಾದವು ನಡೆದವು.

ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಸುರೇಂದ್ರ ಉಗಾರೆ, ಆ‌ರ್.ಪಿ. ಪಾಟೀಲ, ಅನಂತ ಮಾಂಜೊಕರ, ಬಾಲಕೃಷ್ಣ ಕಾಂಬಳೆ, ವಿನೋದ ಪಾಟೀಲ್, ಹೆಗ್ಗನ್ನವರ, ಮಲ್ಲಾಪೂರೆ, ಸುಮೀತ, ಮಂಗಳಾ ಹಿರೇಮಠ, ರಮೇಶ ದೇಶಪಾಂಡೆ, ಪ್ರಶಾಂತ ಪಾಟೀಲ್, ಸಚೀನ ಶಿವನ್ನವರ, ದನ್ಯಕುಮಾರ ಪಾಟೀಲ್ ಹಾಗೂ ಪೂಜಾ ಸವದತ್ತಿ ಸೇರಿದಂತೆ ಇನ್ನಿತರರು ನ್ಯಾಯವಾದಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button