ಅಕ್ರಮ ಮಣ್ಣು ಅಗೆದು ರಸ್ತೆ ಕಾಮಗಾರಿಗೆ ಬಳಿಕೆ: ಗುತ್ತಿಗೆದಾರರ ವಿರುದ್ಧ ಕ್ರಮ ಅಗತ್ಯ
ಗೋಕಾಕ್ : ಗುತ್ತಿಗೆದಾರರು ರಸ್ತೆ ಕಾಮಗಾರಿಗಾಗಿ ಅರಣ್ಯ ಪ್ರದೇಶದಲ್ಲಿರುವ ಮರಗಳನ್ನು ನಾಶ ಮಾಡಿ ಅಕ್ರಮವಾಗಿ ಮಣ್ಣು ಅಗೆದು ರಸ್ತೆ ಕಾಮಗಾರಿಗೆ ಬಳಸಿಕೊಳ್ಳುತ್ತಿರುವ ಘಟನೆ ಗೋಕಾಕ ತಾಲೂಕಿನ ಮಕ್ಕಳಗೇರಿ ಗ್ರಾಮದಲ್ಲಿ ನಡೆದಿದೆ.
ಮಕ್ಕಳಗೇರಿ ಗ್ರಾಮದಿಂದ ಹಿರೆನಂದಿಯವರೆಗೆ ನಡೆದ ರಸ್ತೆ ಕಾಮಗಾರಿಗೆ ಮಕ್ಕಳಗೇರಿ ಹದ್ದಿಯ ಸರ್ವೆ ನಂಬರ್ 167 ನೆದ್ದರಲ್ಲಿರುವ ಅನುಪನಮಡ್ಡಿ ಅರಣ್ಯ ಪ್ರದೇಶದಲ್ಲಿ ಬೆಳೆಯುತ್ತಿರುವ ನೂರಾರು ಮರಗಳನ್ನು ನಾಶಮಾಡಲಾಗಿದೆ. ಅಲ್ಲದೇ ಅಕ್ರಮವಾಗಿ ರಾತ್ರಿ ಹಗಲು ಅರಣ್ಯ ಜಮೀನು ಅಗೆದು ಮಣ್ಣನ್ನು ರಸ್ತೆ ಕಾಮಗಾರಿಗೆ ಬಳಸಿಕೊಂಡಿದ್ದಾರೆ. ಸುಮಾರು ಸಾವಿರಕ್ಕೂ ಹೆಚ್ಚು ಟ್ರಿಪ್ ಮಣ್ಣನ್ನು ಟಿಪ್ಪರ್ ಮೂಲಕ ಅಗೆದು ಸಾಗಿಸಿದ್ದಾರೆಂದು ಸ್ಥಳೀಯ ರೈತ ಸಂಘದ ಸದಸ್ಯರು ಆರೋಪಿಸಿದ್ದಾರೆ.
ಇನ್ನು ಈ ಅಕ್ರಮದ ಬಗ್ಗೆ ಗೋಕಾಕ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸ್ಥಳೀಯ ಅರಣ್ಯ ವೀಕ್ಷಕನಿಗೆ ತಿಳಿಸಿದರೂ ಸಹ ಅಕ್ರಮ ತಡೆಯುತ್ತಿಲ್ಲ. ಇತ್ತ ಸರ್ಕಾರ ಅರಣ್ಯ ಉಳಿಸಿ ಬೆಳೆಸಿ ಎಂದು ಸಾವಿರಾರು ಕೋಟಿ ಹಣ ಮಂಜೂರು ಮಾಡುತ್ತಿದ್ದರೆ, ಇಲ್ಲಿನ ಅರಣ್ಯ ಅಧಿಕಾರಿ ಅರಣ್ಯ ಉಳಿಸಿ ಬೆಳೆಸುವ ಬದಲು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಸ್ಥಳೀಯ ರೈತರು ಆರೋಪಿಸಿದ್ದಾರೆ.