ಕಡಿಮೆ ಅಂಕ ನೀಡಿದಕ್ಕೆ ಬಾಟಲ್‌ಗೆ ಮಾತ್ರೆ ಹಾಕಿದ ವಿದ್ಯಾರ್ಥಿನಿಯರು: ಶಿಕ್ಷಕಿ ಅಸ್ವಸ್ಥ
ಮಂಗಳೂರು: ಗಣಿತ ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿದರೆಂಬ ಕಾರಣಕ್ಕೆ ಆರನೇ ತರಗತಿ ವಿದ್ಯಾರ್ಥಿನಿಯರು ಶಿಕ್ಷಕಿಯ ನೀರಿನ ಬಾಟಲ್‌ಗೆ ಅವಧಿ ಮೀರಿದ ಮಾತ್ರೆ ಹಾಕಿದ ಪರಿಣಾಮ ಇಬ್ಬರು ಶಿಕ್ಷಕಿಯರು ಅಸ್ವಸ್ಥಗೊಂಡು ಚಿಕಿತ್ಸೆ ಪಡೆದಿದ್ದಾರೆ.
ಮಂಗಳೂರಿನ ಉಳ್ಳಾಲದ ಖಾಸಗಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಮಾತ್ರೆ ಹಾಕಿದ್ದ ವಿಷಯ ತಿಳಿಯದ ಗಣಿತ ಶಿಕ್ಷಕಿ ಮತ್ತು ಒಬ್ಬ ಸಹ ಶಿಕ್ಷಕಿ ಬಾಟಲಿ ನೀರು ಕುಡಿದಿದ್ದಾರೆ. ಇದಾದ ಕೆಲವೇ ಸಮಯದಲ್ಲಿ ಓರ್ವ ಶಿಕ್ಷಕಿಯ ಮುಖ ಊದಿಕೊಂಡಿದ್ದು, ಮತ್ತೋರ್ವ ಶಿಕ್ಷಕಿ ಮತ್ತೊಂದು ಬಗೆಯಲ್ಲಿ ಅಸ್ವಸ್ಥಗೊಂಡಿದ್ದಾರೆ.
ಈ ಅವಾಂತರಕ್ಕೆ ಆರನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಕಾರಣ ಎಂದು ಆರೋಪಿಸಲಾಗಿದೆ. ಆದರೆ ಪೊಲೀಸರಿಗೆ ದೂರು ನೀಡಲಾಗಿಲ್ಲ. ಘಟನೆಯ ಎಲ್ಲ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗಣಿತ ವಿಷಯದಲ್ಲಿ ಶಿಕ್ಷಕಿ ಕಡಿಮೆ ಅಂಕ ಕೊಟ್ಟಿದ್ದಕ್ಕೆ ಇಬ್ಬರು ವಿದ್ಯಾರ್ಥಿನಿಯರು ಕೋಪಗೊಂಡಿದ್ದರಂತೆ. ಸರಿಯಾಗಿ ಉತ್ತರ ಬರೆದಿದ್ದರೂ ಅಂಕಗಳನ್ನು ಕೊಟ್ಟಿಲ್ಲ ಎಂದುತ ಅಸಮಾಧಾನಗೊಂಡಿದ್ದರಂತೆ. ಹೀಗಾಗಿ ಶಿಕ್ಷಕಿ ವಿರುದ್ಧ ಹಗೆ ಸಾಧಿಸಲು ಕಡಿಮೆ ಅಂಕ ನೀಡಿದ ಶಿಕ್ಷಕಿಯ ವಾಟರ್ ಬಾಟಲ್‌ಗೆ ಮಾತ್ರೆ ಹಾಕಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಕೃತ್ಯವೆಸಗಿದ ವಿದ್ಯಾರ್ಥಿನಿಯರಿಬ್ಬರನ್ನು ಶಾಲೆಯಿಂದ ಹೊರಹಾಕಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ.