ಭೂ ಪರಿವರ್ತನೆಗೆ 1.50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಾ. ಪಂ. ಇಒ, ಗ್ರಾ.ಪಂ ಪಿಡಿಒ

ದಾವಣಗೆರೆ: ಭೂ ಪರಿವರ್ತನೆಗಾಗಿ 1.50 ಲಕ್ಷ ಹಣವನ್ನು ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ತಾ. ಪಂ. ಇಒ, ಗ್ರಾ.ಪಂ ಪಿಡಿಒ ಬಿದ್ದಿದ್ದಾರೆ.
ಹರಿಹರ ತಾಲೂಕು ಪಂಚಾಯತ್ ಇಒ ರವಿ ಹಾಗೂ ಸಾರಥಿ ಗ್ರಾ.ಪಂ ಪಿಡಿಒ ರಾಘವೇಂದ್ರ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳಾಗಿದ್ದಾರೆ.ಹರಿಹರದ ಬಳಿಯ ಅಮರಾವತಿ ಕಾಲೋನಿಯಲ್ಲಿ ಪಿಡಿಒ ರಾಘವೇಂದ್ರ ಅವರ ನಿವಾಸದಲ್ಲಿ 1.50 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಒ ರವಿ ಅವರ ನಿರ್ದೇಶನದಂತೆ ಪಿಡಿಓ ಲಂಚ ಸ್ವೀಕಾರಿಸಿದ ಹಿನ್ನೆಲೆ ರವಿ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶ್ರೀನಿವಾಸ ಟಿವಿ ಎಂಬುವರು ಹರಿಹರ ತಾಲೂಕಿನ ಸಾರಥಿ ಗ್ರಾ.ಪಂ ವ್ಯಾಪ್ತಿಯ ಕರಲಹಳ್ಳಿ ಬಳಿ ಒಂದು ಎಕರೆ ಜಮೀನು ಖರೀದಿಸಿ ಸೈಟ್ ಮಾಡಲು ಭೂ ಪರಿವರ್ತನೆಗೆ ಅರ್ಜಿ ಹಾಕಿದ್ದರು. ಇದಕ್ಕೆ ಅನುಮತಿ ನೀಡಲು ಇಒ ರವಿ 1.60 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ 1.50 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಎಸ್ಪಿ ಎಂ.ಎಸ್ ಕೌಲಾಪೂರೆ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಗಳಾದ ಮಧುಸೂದನ್, ಪ್ರಭು ಸೂರಿನ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.