ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದಿಂದ ಆಕಾಂಕ್ಷಿ: ಡಾ. ಆರ್. ಎಂ. ಕುಬೇರಪ್ಪ.
ಗದಗ: 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಹಾವೇರಿ- ಗದಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಆಕಾಂಕ್ಷಿ ಇದ್ದೇನೆ ಎಂದು ಕೆಪಿಸಿಸಿ ಪದವೀಧರರ ಘಟಕದ ರಾಜ್ಯಾಧ್ಯಕ್ಷ ಡಾ. ಆರ್.ಎಂ.ಕುಬೇರಪ್ಪ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ದಶಕಗಳಿಂದ ಶಿಕ್ಷಕರ ಸಂಘಟನೆಯಲ್ಲಿ ತೊಡಗಿದ್ದು, 2004ರಿಂದ ಈವರೆಗೆ ಮೂರು ಬಾರಿ ಶಿಕ್ಷಕರ ಕ್ಷೇತ್ರ ಹಾಗೂ ಒಂದು ಬಾರಿ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿದ್ದೇನೆ.
ಹಾವೇರಿ ಗದಗ ಕ್ಷೇತ್ರದಲ್ಲಿ ಹೆಚ್ಚಿನ ಜನ ಸಂಪರ್ಕ ಇದೆ. ಈ ಕಾರಣಕ್ಕೆ ಈ ಬಾರಿ ಕಾಂಗ್ರೆಸ್‌ನಿಂದ ಟಿಕೆಟ್ ಕೇಳುತ್ತಿದ್ದೇನೆ. ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಇದ್ದಾರೆ. ಹಾಗಾಗಿ, ಟಿಕೆಟ್ ನೀಡುವ ಮುನ್ನ ಪಕ್ಷದ ವರಿಷ್ಠರು ಕ್ಷೇತ್ರದಲ್ಲಿ ಸಮೀಕ್ಷೆ ಮಾಡಿಸಲಿ. ಅದರಲ್ಲಿ ನನಗೆ ಅರ್ಹತೆ ಬಂದರೆ ನನ್ನನ್ನು ಪರಿಗಣಿಸಬೇಕು ಎಂದರು.
ಈ ಬಾರಿ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಅಲೆ ಹಾಗೂ ಗೆಲುವಿನ ವಾತಾವರಣವಿದೆ. ದೇಶದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಚಿಂತನೆಯಲ್ಲಿ ಜನರು ಇದ್ದಾರೆ. ಕ್ಷೇತ್ರದ ಮತದಾರರು, ಮುಖಂಡರು ಕಾಂಗ್ರೆಸ್ ಪಕ್ಷದ ಟಿಕೆಟ್ ಕೇಳುವಂತೆ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಪಕ್ಷದ ವರಿಷ್ಠರು ನನಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್‌ನಿಂದ ಹಲವು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಪಕ್ಷದಿಂದ ಬೇರೆಯವರನ್ನು ಪರಿಗಣಿಸಿದರೂ ಪಕ್ಷದ ಗೆಲುವಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಮುಖಂಡರಾದ ಎಸ್.ಎಚ್.ಹುಚ್ಚಗೊಂಡ, ಡಾ.ಕೆ.ಸಿ.ನಾಗರಜ್ಜಿ, ಗೋಪಾಲರಡ್ಡಿ, ಡಾ.ಹನಮಂತಗೌಡ ಕಲ್ಮನಿ, ಉಳವೇಶ ಮದ್ನೂರ ಇದ್ದರು.