Notice: Function _load_textdomain_just_in_time was called incorrectly. Translation loading for the loginizer domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home2/suvarnagiritimes/public_html/wp-includes/functions.php on line 6114
“ಗೃಹ ಲಕ್ಷ್ಮಿ” ಯೋಜನೆ;ಹೋರ್ಡಿಂಗ್ಸ್, ಸಾರಿಗೆ ಬಸ್ ಬ್ರಾಂಡಿಂಗ್, ಜಾಹೀರಾತಿಗೆ 8.90 ಕೋಟಿ ರು.ವೆಚ್ಚ. - suvarna giri times
ಬೆಂಗಳೂರುಸುವರ್ಣ ಗಿರಿ ಟೈಮ್ಸ್

“ಗೃಹ ಲಕ್ಷ್ಮಿ” ಯೋಜನೆ;ಹೋರ್ಡಿಂಗ್ಸ್, ಸಾರಿಗೆ ಬಸ್ ಬ್ರಾಂಡಿಂಗ್, ಜಾಹೀರಾತಿಗೆ 8.90 ಕೋಟಿ ರು.ವೆಚ್ಚ.

ಬೆಂಗಳೂರು; ಗೃಹ ಲಕ್ಷ್ಮಿ ಯೋಜನೆಯು ರಾಜ್ಯವನ್ನು ಬೃಹತ್ ಆದಾಯ ಕೊರತೆಗೆ ತಳ್ಳಲು ಕಾರಣವಾಗಲಿದೆ ಎಂಬುದು ದಾಖಲೆ ಸಮೇತ ನಿರೂಪಿತವಾಗಿರುವ ಬೆನ್ನಲ್ಲೇ ಯೋಜನೆ ಕುರಿತಾಗಿ ದಿನಪತ್ರಿಕೆ ಜಾಹೀರಾತುಗಳಿಗೆ 1.20 ಕೋಟಿ ರು. ಸೇರಿದಂತೆ ದೃಶ್ಯ ಹೋರ್ಡಿಂಗ್ ಸಾರಿಗೆ ಬ್ರಾಂಡಿಂಗ್, ಚಿತ್ರಮಂದಿರಗಳಲ್ಲಿ ಎಫ್ ಎಂ ರೇಡಿಯೋ, ಕಾಲ್ ಸೆಂಟರ್‍ ಇನ್ನಿತರೆ ವಿಭಾಗಗಳಲ್ಲಿ ಪ್ರಚಾರ ಮಾಡಲು ಒಟ್ಟಾರೆ 8.90 ಕೋಟಿ ರು.ಗಳನ್ನು ಬಿಡುಗಡೆ ಮಾಡಿರುವುದು ಇದೀಗ ಬಹಿರಂಗವಾಗಿದೆ.

ಇದೇ ಯೋಜನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕ್ರಮಗಳಿಗಾಗಿ 50 ಲಕ್ಷ ರು.ಗಳನ್ನು ಬಳಸಲು ಮುಂದಾಗಿರುವ ಬೆನ್ನಲ್ಲೇ ಇಡೀ ಯೋಜನೆಯ ಪ್ರಚಾರಕ್ಕಾಗಿ 8.90 ಕೋಟಿ ರು.ಗಳನ್ನು ಬಿಡುಗಡೆ ಮಾಡಿ 2023ರ ಜುಲೈ 14ರಂದು ಮಾರ್ಪಾಡು ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

2023-24ನೇ ಸಾಲಿನ ಗೃಹ ಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸುವ ಸಂಬಂಧ ಈಗಾಗಲೇ ಆದೇಶಗಳನ್ನು ಹೊರಡಿಸಿರುವ ಕಾಂಗ್ರೆಸ್ ಸರ್ಕಾರವು ಈ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ತ್ರೀ ಶಕ್ತಿ ಶಾಖೆ ಮೂಲಕ ನಿರ್ವಹಿಸುತ್ತಿರುವುದು ಗೊತ್ತಾಗಿದೆ. ಈ ಯೋಜನೆಯ ಐಸಿಎ ಪರಿಕರಗಳಿಗೆ 840.90 ಲಕ್ಷ ರು.ಗಳ ಅನುದಾನವನ್ನು ಸ್ತ್ರೀ ಶಕ್ತಿ ಶಾಖೆಯ ಲೆಕ್ಕ ಶೀರ್ಷಿಕೆಯಿಂದ ಬಿಡುಗಡೆ ಮಾಡಿರುವುದು ಮಾರ್ಪಾಡು ಆದೇಶದಿಂದ ತಿಳಿದು ಬಂದಿದೆ.

31 ಜಿಲ್ಲಾ ಕೇಂದ್ರಗಳಿಗೆ 2 ತಿಂಗಳಿಗೆ 1 ಲಕ್ಷದಂತೆ ಒಟ್ಟು 3100 ಲಕ್ಷ ರು., 234 ತಾಲೂಕುಗಳಿಗೆ 2,00,000 ರು.ನಂತೆ ಒಟ್ಟು 510.00 ಲಕ್ಷ ರು., ದಿನಪತ್ರಿಕೆ ಜಾಹೀರಾತುಗಳಿಗೆ 100.00 ಲಕ್ಷ, ಅರ್ಜಿ ನಮೂನೆಗಳ ಮುದ್ರಣಕ್ಕೆ ಪ್ರತಿ ಜಿಲ್ಲೆಗೆ 1 ಲಕ್ಷ ರು.ನಂತೆ ಒಟ್ಟು 31.00 ಲಕ್ಷ ರು., ರಾಜ್ಯಮಟ್ಟದ ಬ್ಯಾನರ್ ಪ್ರಿಂಟಿಂಗ್, ಪೋಸ್ಟರ್ಸ್, ಬ್ಯಾನರ್ಸ್, ಐಇಸಿಗೆ 50.00 ಲಕ್ಷ ರು., ಸಮಾರಂಭಕ್ಕೆ 50.00 ಲಕ್ಷ ರು, ಸಾಮಾಜಿಕ ಜಾಲತಾಣಕ್ಕೆ 50.00 ಲಕ್ಷ ಹೆಲ್ಸ್ 3 ಲೈನ್- 6 ಕುರ್ಚಿಗಳಿಗೆ 210 ಲಕ್ಷ ರು.ನಂತೆ 9 ತಿಂಗಳಿಗೆ 18.90 ಲಕ್ಷ ರು. ಸೇರಿ ಒಟ್ಟಾರೆ 840.90 ಲಕ್ಷ ರು.ಗಳನ್ನು ಬಿಡುಗಡೆಗೊಳಿಸಿ 2023ರ ಜೂನ್ 12ರಂದು ಆದೇಶ ಹೊರಡಿಸಿತ್ತು.

ಆದರೆ ಈ ಆದೇಶವನ್ನು 2023ರ ಜುಲೈ 14ರಂದು ಮಾರ್ಪಡಿಸಲಾಗಿತ್ತು. ಈ ಮಾರ್ಪಾಡು ಆದೇಶದ ಪ್ರಕಾರ ರಾಷ್ಟ್ರ ಮತ್ತು ರಾಜ್ಯಮಟ್ಟದ ಕನ್ನಡ ಮತ್ತು ಆಂಗ್ಲ ದಿನಪತ್ರಿಕೆಗಳಿಗೆ 120.00 ಲಕ್ಷ ರು., (ರಾಷ್ಟ್ರ 10,10 ರಾಜ್ಯಮಟ್ಟದ ಕನ್ನಡ, 4 ಆಂಗ್ಲ ಪತ್ರಿಕೆ), ಇಲಾಖೆಯ ಒಡೆತನದಲ್ಲಿರುವ ಹೆದ್ದಾರಿ ಫಲಕಗಳಲ್ಲಿ ಪ್ರಚಾರ ಮಾಡಲು 200.00 ಲಕ್ಷ ರು., ರಾಜ್ಯದ ಕೆಎಸ್‌ಆರ್‌ಟಿಸಿ ಹಾಗೂ ಸಾರಿಗೆ ಬ್ರಾಂಡಿಂಗ್‌ಗೆ 250.00 ಲಕ್ಷ ರು., 500ಕ್ಕೂ ಹೆಚ್ಚು ಆಸನ ಮತ್ತು ಕಡಿಮೆ ಆಸನ ಹೊಂದಿರುವ ಚಿತ್ರಮಂದಿರಗಳಲ್ಲಿ ಜಾಹೀರಾತಿಗಾಗಿ 150.00 ಲಕ್ಷ ರು., (ಪ್ರತಿ 10 ಸೆಕೆಂಡ್‌ಗೆ 18 ರು. ಮತ್ತಂತು 15.60 ರು.ನಂತೆ), ಎಫ್ ಎಂ ರೇಡಿಯೋ ವಾಹಿನಿಗಳಿಗೆ 20.00 ಲಕ್ಷ (30 ಸೆಕೆಂಡ್ ಅವಧಿಯ ಜಾಹೀರಾತನ್ನು 10 ದಿವಸಗಳ ಕಾಲ ಪ್ರಸಾರ ಮಾಡಲು ), ಕಾಲ್ ಸೆಂಟರ್‌ಗಳಿಗಾಗಿ 50.00 ಲಕ್ಷ, ಸೋಷಿಯಲ್ ಮೀಡಿಯಾಗಾಗಿ 50.00 ಲಕ್ಷ ರು. ಸೇರಿ ಒಟ್ಟಾರೆ 840.90 ಲಕ್ಷ ರು.ಗಳನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿರುವುದು ತಿಳಿದು ಬಂದಿದೆ.

ಗೃಹ ಲಕ್ಷ್ಮಿ ಯೋಜನೆ ಜಾರಿ ಕುರಿತು ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೋಂದಣಿ ಸಂಬಂಧಿತ ನೀಡಿರುವ ವಿವರಗಳನ್ನು ನೀಡಿರುವ ಬೆನ್ನಲ್ಲೇ ಇದೇ ಯೋಜನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕ್ರಮಗಳಿಗಾಗಿ 50 ಲಕ್ಷ ರು.ಗಳನ್ನು ವಿನಿಯೋಗಿಸಲು ಅನುಮತಿ ನೀಡಿದ್ದನ್ನು ‘ದಿ ಫೈಲ್’ 2023 ರ ಜುಲೈ 19ರಂದು ವರದಿ ಪ್ರಕಟಿಸಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕ್ರಮಗಳಿಗೆ ಒಟ್ಟಾರೆ 50 ಲಕ್ಷ ರು. ಪೈಕಿ 25 ಲಕ್ಷ ರು.ಗಳನ್ನು ಬಿಡುಗಡೆಗೊಳಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು 2023ರ ಜುಲೈ 10ರಂದು ಆದೇಶವನ್ನು (ಮಮಿ 70 ಮಮಾ 2023 (ಭಾಗ-16) ಹೊರಡಿಸಿದೆ.

ಮಹಿಳಾ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದ ಉದ್ಯೋಗಿನಿ ಲೆಕ್ಕ ಶೀರ್ಷಿಕೆಯಡಿ (ಲೆಕ್ಕ ಶೀರ್ಷಿಕೆ 2235-02-103-0-38-059) ನಿಗದಿಪಡಿಸಿರುವ 1100.00 ಲಕ್ಷ ರು. ಅನುದಾನದಲ್ಲಿ ಗೃಹ ಲಕ್ಷ್ಮಿ ಯೋಜನೆ ಸಂಬಂಧಿತ ಕಾರ್ಯಕ್ರಮಗಳಿಗಾಗಿ ಐಇಸಿ ಪರಿಕರಗಳೀಗೆ 840.90 ಲಕ್ಷ ರು.ಗ ಅನುದಾನವನ್ನು ಒಂದು ಬಾರಿಗೆ ಮಾತ್ರ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದರು. ಈ ಅನುದಾನದಲ್ಲಿ ಒಟ್ಟು 50 ಲಕ್ಷ ರು.ಗಳನ್ನು ನಿಗದಿಪಡಿಸಿತ್ತು.

ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ 2023ರ ಜೂನ್ 12ರ ಆದೇಶದಲ್ಲಿ ಸೋಷಿಯಲ್ ಮೀಡಿಯಾಗಾಗಿ 50.00 ಲಕ್ಷ ಬಿಡುಗಡೆ ಮಾಡಿದ್ದು ಈ ಸಂಬಂಧ ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್‌ಟೈಸಿಂಗ್ ಲಿಮಿಟೆಡ್ ನಿಂದ 24,96,585 ರು.ಗಳ ದರಪಟ್ಟಿ ಪಡೆದು ಸೇವೆ ಪಡೆಯಲು ಅನುಮತಿ ನೀಡಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಮಹಿಳಾ ಮಕ್ಕಳ ಅಭಿವೃದ್ಧಿ ಕಲ್ಯಾಣ ಸಚಿವರ ಫೋಟೋ ಶೂಟ್, ಕ್ರಿಯೇಟಿವ್ ವಿಡಿಯೋ, ಮುದ್ರಣ ಮಾಧ್ಯಮಕ್ಕೆ ಜಾಹೀರಾತು ವಿನ್ಯಾಸ, ಫೇಸ್‌ಬುಕ್‌ನಲ್ಲಿ ಪ್ರಮೋಷನ್, ಮೂರನೇ ವ್ಯಕ್ತಿಯ ಅಭಿಯಾನ, ಸರ್ಕಾರಿ ಕಾರ್ಯಕ್ರಮಗಳು, ಸಮಾರಂಭಗಳು, ಮುದ್ರಣ, ಸಾಮಾಜಿಕ ಮಾಧ್ಯಮ, ಇತರೆ ಚಟುವಟಿಕೆಗಳಿಗೆ ಒಂದು ವರ್ಷದ ಅವಧಿಗೆ ಎಂಸಿಎ ಸೇವೆ ಪಡೆಯಲು ಪಾರದರ್ಶಕತೆ ಕಾಯ್ದೆಯಿಂದ 4 ಜಿ ವಿನಾಯಿತಿ ಪಡೆದಿದೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರ ಫೋಟೋ ಶೂಟ್, ಮುದ್ರಣ ಜಾಹೀರಾತು, ಸಾಮಾಜಿಕ ಜಾಲತಾಣದಲ್ಲಿ ಅಭಿಯಾನಕ್ಕೆ ಘಟಕವೊಂದಕ್ಕೆ 1,65,000 ರು., ವಿಡಿಯೋ ಪರಿಕಲ್ಪನೆ, 30ರಿಂದ 50 ಸೆಕೆಂಡ್‌ನ ವಿಡಿಯೋಗಳು, ಫಲಾನುಭವಿಗಳ ಯಶಸ್ಸು ಆಧರಿತ ವಿಡಿಯೋ ವರದಿ, ನೋಂದಾವಣೆ ಪ್ರಕ್ರಿಯೆಗಳು, ಚಿತ್ರಕತೆ, ದತ್ತಾಂಶ ಸಂಗ್ರಹಣೆ, ಕ್ಯಾಮೆರಾ, ಬೆಳಕು, ವಿಡಿಯೋ ಗ್ರಾಫರ್, ಕಲಾವಿದರು, ಫೋಟೋ ಗ್ರಾಫರ್ಸ್, ಸಾರಿಗೆ, ಆಹಾರ, ಸ್ಟುಡಿಯೋ ಇತ್ಯಾದಿಗಳಿಗಾಗಿ 11,00,000 ರು, 10 ಪೋಸ್ಟರ್, 20 ವಿಡಿಯೋ, ಫೇಸ್‌ಬುಕ್, ಇನ್ಸಾಗ್ರಾಂನಲ್ಲಿ ಪ್ರತಿ ದಿನ ಪುಟವನ್ನು ಬೂಸ್ಟ್ ಮಾಡಲು 500 ರು ಸೇರಿದಂತೆ ಘಟಕವೊಂದಕ್ಕೆ 25,000 ರು ನಂತೆ 750000 ರು.ಗಳನ್ನು ನಿಗದಿಪಡಿಸಿತ್ತು.

ಆರ್ಥಿಕತೆಯ ಚಲನಶೀಲತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಗೃಹ ಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಭರ್ಜರಿ ಪ್ರಚಾರ ಪಡೆದುಕೊಂಡಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು, ಆರ್ಥಿಕ ಇಲಾಖೆಯು ನೀಡಿದ್ದ ಎಚ್ಚರಿಕೆಯನ್ನೂ ಗಂಭೀರವಾಗಿ ಪರಿಗಣಿಸದೇ ರಾಜ್ಯವನ್ನು ಬೃಹತ್ ಆದಾಯ ಕೊರತೆಗೆ ದೂಡಲಿದೆ ಎಂಬುದನ್ನು ‘ದಿ ಫೈಲ್’ ದಾಖಲೆ ಸಹಿತ 2023ರ ಜುಲೈ 24ರಂದು ಹೊರಗೆಡವಿತ್ತು.

ಅಲ್ಲದೇ ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಲು ಆರ್ಥಿಕ ಇಲಾಖೆಯು ಪ್ರಸ್ತುತ ಇರುವ ಹಣಕಾಸಿನ ನಿರ್ಬಂಧ ಮತ್ತು ಆರ್ಥಿಕ ಮುಗ್ಗಟ್ಟುಗಳಿರುವ ಕಾರಣ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಈ ಯೋಜನೆಗೆ ಅವಕಾಶ ಕಲ್ಪಿಸುವುದು ಕಷ್ಟಕರ. ಪ್ರತಿ ಆರ್ಥಿಕ ವರ್ಷದಲ್ಲಿ ಅಗಾಧ ಪ್ರಮಾಣದ ಹಣವನ್ನು ಈ ಯೋಜನೆಗೆ ಒದಗಿಸಲು ಸಾಧ್ಯವಿಲ್ಲ. ಈ ಯೋಜನೆಗೆ ಮಾನದಂಡಗಳನ್ನು ನಿಗದಿಪಡಿಸುವ ಮೂಲಕ ಫಲಾನುಭವಿಗಳ ಸಂಖ್ಯೆಯನ್ನೂ ಅತ್ಯಗತ್ಯವಾಗಿ ಕಡಿತಗೊಳಿಸಬೇಕು ಎಂದು ಆರ್ಥಿಕ ಇಲಾಖೆಯು ಕಠಿಣ ಅಭಿಪ್ರಾಯ ನೀಡಿದ್ದನ್ನು ಸ್ಮರಿಸಬಹುದು ಎಂದು the file ವರದಿ ಮಾಡಿದೆ.

Related Articles

Leave a Reply

Your email address will not be published. Required fields are marked *

Back to top button