ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನಚ್ಚರಿಕೆ: ಪ್ರಿಯಾಂಕ್ ಖರ್ಗೆ.
ಬೆಂಗಳೂರು : ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಎಲ್ಲಾ ಜಿಲ್ಲೆಗಳ CEOಗಳ ನೇತೃತ್ವದಲ್ಲಿ ತಯಾರಾದ ನಿಯೋಜಿತ ರೂಪುರೇಷೆ (ಕಂಟಿನ್ಗನ್ಸ್ ಪ್ಲಾನ್) ವರದಿಯ ಆಧಾರದ ಮೇಲೆ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನಚ್ಚರಿಕೆಯಿಂದ ಸರ್ಕಾರದ ವತಿಯಿಂದ 75.14 ಕೋಟಿ ಹಣವನ್ನ ಬಿಡುಗಡೆ ಮಾಡಲಾಗಿದೆ.
ಇದರಿಂದ, ಈ ಹಿಂದೆ ಒದಗಿಸಿದ್ದ 1 ಕೋಟಿ ಹಣ ಸೇರಿದಂತೆ ಸರ್ಕಾರ ಈವರೆಗೂ ಒಟ್ಟು 76.14 ಕೋಟಿ ಹಣ ನೀಡಿದಂತಾಗಿದೆ.
ರಾಜ್ಯದ ಹಲವೆಡೆ ಮುಂಗಾರಿನ ಅಭಾವ ಎದುರಾಗಿದ್ದು ಹಲವು ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಲಕ್ಷಣಗಳು ಕಾಣುತ್ತಿವೆ. ಹೀಗಾಗಿ ಗ್ರಾಮೀಣ ಭಾಗದ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದೆ. ಎಲ್ಲಾ ಜಿಲ್ಲೆಗಳ ಕಾರ್ಯನಿರ್ವಾಹಕ ಅಧಿಕಾರಿಗಳ CEO ಗಳ ಸಭೆ ಕರೆದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಜಿಲ್ಲಾವಾರು ಎಷ್ಟು ತಾಲೂಕುಗಳಲ್ಲಿ ಮಳೆಯಾಗಿದೆ? ಎಷ್ಟು ತಾಲೂಕಿನಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಲಿದೆ? ಎಲ್ಲೆಲ್ಲಿ ಕೆರೆಗಳಲ್ಲಿ ನೀರಿನ ಪ್ರಮಾಣ ಕ್ಷೀಣಿಸುತ್ತಿದೆ. ಯಾವ ಹಳ್ಳಿಗಳಿಗೆ ಕುಡಿಯುವ ನೀರನ್ನು ಟ್ಯಾಂಕರ್ ಅಥವಾ ಬಾಡಿಗೆ ಬೋರ್ ವೆಲ್ ಮೂಲಕ ಒದಗಿಸಬೇಕು ಎಂಬುದನ್ನ ಸಂಪೂರ್ಣವಾಗಿ ಪರಿಶೀಲಿಸಿ ಅಧಿಕಾರಿಗಳಿಂದ ವರದಿ ಸಿದ್ದಪಡಿಸಿ ಹಣ ಬಿಡುಗಡೆ ಮಾಡಲಾಗಿದೆ. ಈ ಮೂಲಕ ರಾಜ್ಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಾರ್ವಜನಿಕ ದೂರುಗಳು ಬಾರದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.
ಒಟ್ಟು 101 ತಾಲೂಕುಗಳ 366 ಗ್ರಾಮ ಪಂಚಾಯತಿಗಳಲ್ಲಿ 514 ಹಳ್ಳಿಗಳಿಗೆ 254 ಟ್ಯಾಂಕರ್ ಗಳಲ್ಲಿ ನೀರು ಪೂರೈಕೆ ಮಾಡಲಾಗುವುದು. ಒಟ್ಟು ರಾಜ್ಯಾದ್ಯಂತ ಟ್ಯಾಂಕರ್ ಗಳಲ್ಲಿ ಪ್ರತಿ ದಿನ 703 ಟ್ರಿಪ್ ಗಳ ಮೂಲಕ ಕುಡಿಯುವ ನೀರನ್ನ ಪೂರೈಕೆ ಮಾಡಲಾಗುವುದು. ಜೊತೆಗೆ 465 ಖಾಸಗಿ ಬೋರ್ ವೆಲ್ ಗಳನ್ನು ಬಾಡಿಗೆ ಪಡೆದು ಕುಡಿಯುವ ನೀರನ್ನು ಜನರಿಗೆ ಸರಬರಾಜು ಮಾಡಲೂ ಹಣ ಒದಗಿಸಲಾಗಿದೆ.
ಒಟ್ಟು ಟ್ಯಾಂಕರ್ ನೀರು ಪೂರೈಕೆಗೆ 74.21 ಕೋಟಿ ಹಣವನ್ನ ನೀಡಲಾಗಿದ್ದು, ಖಾಸಗಿ ಬೋರ್ ವೆಲ್ ಗಳನ್ನು ಬಾಡಿಗೆ ಪಡೆಯಲು 93 ಲಕ್ಷ ಹಣವನ್ನ ನೀಡಲಾಗಿದೆ. ಈ ಮೂಲಕ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮುನ್ನಚ್ಚರಿಕೆಯಿಂದ ಸರ್ಕಾರ ಸರ್ವ ಸನ್ನದ್ಧವಾಗಿದೆ.