suvarna giri timesಬೆಂಗಳೂರು

ಸದಾಶಿವ ಆಯೋಗ ವರದಿಯನ್ವಯ ಒಳಮೀಸಲಾತಿ ಜಾರಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಒತ್ತಾಯ ಮಾಡುತ್ತವೆ: ಪರಮೇಶ್ವರ್‌

ಬೆಂಗಳುರು: ಸದಾಶಿವ ಆಯೋಗದ ವರದಿಯನ್ವಯ ಒಳಮೀಸಲಾತಿ ಜಾರಿ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಒತ್ತಾಯ ಮಾಡುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.

ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ‘ಪರಿಶಿಷ್ಟ ಸಮುದಾಯಗಳ ಸಹೋದರತ್ವ’ ಸಮಾವೇಶದಲ್ಲಿ ಅವರು ಮಾತನಾಡಿದ್ದಾರೆ.

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ನನ್ನ ಅಧ್ಯಕ್ಷತೆಯಲ್ಲೇ ಆಗಿದೆ. ಸದಾಶಿವ ಆಯೋಗದ ವರದಿಯನ್ನು ಮೊದಲ ಅಧಿವೇಶನದಲ್ಲೇ ಮಂಡಿಸುವುದಾಗಿ ಭರವಸೆ ಕೊಟ್ಟಿದ್ದೇವೆ. ನಾನು ಹಾಗೂ ಸಚಿವರಾದ ಕೆ.ಎಚ್‌.ಮುನಿಯಪ್ಪ, ಡಾ.ಎಚ್.ಸಿ.ಮಹದೇವಪ್ಪ, ಪ್ರಿಯಾಂಕ್‌ ಖರ್ಗೆ, ಆರ್‌.ಬಿ.ತಿಮ್ಮಾಪೂರ್‌ ಅವರು ಮುಖ್ಯಮಂತ್ರಿಯವರಲ್ಲಿ ಒತ್ತಾಯ ಮಾಡುತ್ತೇವೆ. ಮುಂದಿನ ಅಧಿವೇಶನದಲ್ಲಿ ಅದನ್ನು ಮಂಡಿಸಬೇಕು ಅಂತ ಹೇಳುತ್ತೇವೆ. ಸಮುದಾಯದ ಸಮಸ್ಯೆ, ಬೇಡಿಕೆಗಳ ಬಗ್ಗೆ ನಾವು ಮಾತಾಡಿಲ್ಲ ಅಂದರೆ ಅಲ್ಲಿ ನಾವು ಯಾಕಿರಬೇಕು? ಎಂದು ಪ್ರಶ್ನಿಸಿದ್ದಾರೆ.

ದಲಿತ ಮುಖ್ಯಮಂತ್ರಿ ವಿಚಾರವಾಗಿ ಮಾತನಾಡಿರುವ ಅವರು, “ನಾನು ಮುಖ್ಯಮಂತ್ರಿ ಯಾಕೆ ಆಗಬಾರದು?” ಎಂದು ಕೇಳಿದ್ದಾರೆ.

“ನಮ್ಮ ಪಕ್ಷದ ಆಂತರಿಕ ವಲಯದಲ್ಲಿ ಗೆಲುವಿನ ಪರಾಮರ್ಶೆ ಮಾಡುವಾಗ ಈ ಬಾರಿ ದಲಿತರು ನಮ್ಮ ಕೈ ಹಿಡಿದಿದ್ದಾರೆ, ಮುಸ್ಲಿಮರು ಶೇ.100 ನಮ್ಮ ಕೈ ಹಿಡಿದಿದ್ದಾರೆ ಅಂತ ಹೇಳುತ್ತಾರೆ. ನಮ್ಮ ಬಗ್ಗೆ ಈಗ ಎಲ್ಲರಿಗೆ ಗೊತ್ತಾಗಿದೆ, 51 ಮೀಸಲು ಕ್ಷೇತ್ರಗಳ ಪೈಕಿ 32ರಲ್ಲಿ ಗೆದ್ದಿದ್ದೇವೆ” ಎಂದಿದ್ದಾರೆ.

ಕಾಂಗ್ರೆಸ್ 2018ರಲ್ಲಿ ಸೋಲು ಕಂಡಿತು. ಯಾವ ಸಮುದಾಯವನ್ನು ಕಡೆಗಣಿಸಿದರೋ ಅದರಿಂದ ಪಾಠ ಕಲಿಯಬೇಕಾಯಿತು. ನಮ್ಮನ್ನು ಒಡೆದು ಆಳೋಕೆ ನೋಡಿದರು ಎಂದು ಪರಮೇಶ್ವರ್‌ ಅಸಮಾಧಾನ ಹೊರಹಾಕಿದ್ದಾರೆ.

ನಮ್ಮ ನಾಯಕರು ಕೆ.ಎಚ್.ಮುನಿಯಪ್ಪ ನೇತೃತ್ವದಲ್ಲಿ ಜಗಜೀವನ್​ರಾಮ್ ಜಯಂತಿ‌ ಮಾಡಲು ಹೇಳಿದರು, ನನ್ನ ನೇತೃತ್ವದಲ್ಲಿ ಅಂಬೇಡ್ಕರ್ ಜಯಂತಿ ಮಾಡಲಿಕ್ಕೆ ಹೇಳಿದರು. ಅಲ್ಲೂ ನಮ್ಮನ್ನು ಒಡೆದು ಆಳೋಕೆ ನೋಡಿದರು ಎಂದಿರುವ ಅವರು​, ‘ಜಗಜೀವನ್​ರಾಮ್ ಎಡಗೈ, ಅಂಬೇಡ್ಕರ್ ಬಲಗೈ ಅಂತ ನಮಗೆ ಮಾಡಲು ಹೇಳುತ್ತಿದ್ದಾರೆ. ನಾವು ಮಾಡುವುದು ಬೇಡ, ಒಪ್ಪುವುದೂ ಬೇಡ ಅಂತ ಮುನಿಯಪ್ಪಗೆ ನಾನೇ ಹೇಳಿದೆ’ ಎಂದು ಹೇಳಿದ್ದಾರೆ.

ನಮ್ಮನ್ನು ಒಡೆದು ಆಳುವ ನೀತಿ ಒಪ್ಪುವುದು ಬೇಡ ಎಂದು ನಾವು ಇಬ್ಬರೂ ನಿರ್ಧಾರ ಮಾಡಿದೆವು. ಆ ನಂತರ ಒಂದಾಗಿ ಕಾರ್ಯಕ್ರಮ ಮಾಡುವ ತೀರ್ಮಾನ ತೆಗೆದುಕೊಂಡೆವು. ಆಮೇಲೆ ಚಿತ್ರದುರ್ಗದಲ್ಲಿ ಐಕ್ಯತೆ ಸಮಾವೇಶ ನಡೆಸಿದೆವು. ನಾವೆಲ್ಲರೂ ಐಕ್ಯತೆಯಿಂದ ಇರಬೇಕು ಎಂದು ಸಂದೇಶ ಹೋಯಿತು, ಆ ಸಂದೇಶ ಆದಮೇಲೆ ಎಸ್‌ಸಿ ಎಸ್ಟಿ ಒಂದಾಗಿದ್ದಾರೆ ಅಂತಾ ಮಾತಾಡೋಕೆ ಶುರು ಮಾಡಿದರು. ನಮ್ಮಲ್ಲಿ ಎಡ – ಬಲ ಇರಬಾರದು ಅನ್ನೋ ಪಾತ್ರದಲ್ಲಿ ಮುನಿಯಪ್ಪ ಪ್ರಮುಖರಾಗಿದ್ದಾರೆ ಎಂದು ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button