ಗದಗದ ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ವಯೋಸಹಜದಿಂದ ನಿಧನ.
ಗದಗ: ತಾಲೂಕಿನ ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ (ಅನಸೂಯ) ವಯೋಸಹಜದಿಂದ ನಿಧನ ಹೊಂದಿದೆ. ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ಸೂಚನೆಯಂತೆ ಹುಲಿಯ ಅಂತ್ಯಕ್ರಿಯೆಯನ್ನು ಇಲಾಖೆ ನೆರವೇರಿಸಿದೆ.
ಮೈಸೂರಿನ ಮೃಗಾಲಯದಲ್ಲಿ ಜನಿಸಿದ್ದ ಅನಸೂಯ (ಹುಲಿ)ಗೆ ಮೂರುವರೆ ತಿಂಗಳು ಆಗುತ್ತಿದ್ದಂತೆ ಮೈಸೂರಿನ ಮೃಗಾಲಯದಿಂದ ಬಿಂಕದಕಟ್ಟಿ ಮೃಗಾಲಯಕ್ಕೆ ತರಲಾಗಿತ್ತು.
ಮೈಸೂರಿನಿಂದ ಅನಸೂಯಳನ್ನು ಬೋನಿನ ಒಳಗೆ ಹಾಕಿ ತರಬೇಕಾದರೆ ಕಬ್ಬಿಣದ ಸರಳುಗಳನ್ನು ಬಾಯಿಯಿಂದ ಕಚ್ಚಿ ತನ್ನ ಕೋಪ ಹೊರಹಾಕಿತ್ತು. ಬಾಯಿಯಿಂದ ಕಚ್ಚುವಾಗ ಅದರ ಹಲ್ಲುಗಳು ಹಾಗೂ ದವಡೆಗೆ ಗಂಭೀರ ಹಾನಿಯಾಗಿತ್ತು.
ಇದಕ್ಕೆ ಪಶುವೈದ್ಯರು ಚಿಕಿತ್ಸೆ ನೀಡಿದ್ದರು. ಆದರೆ ಮಾಂಸ ಹಾಗೂ ಮಾಂಸದ ಗಟ್ಟಿ ಪದಾರ್ಥವನ್ನು ಜೀರ್ಣಿಸಿಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿತ್ತು. ಇದರಿಂದ ಅಂದಿನಿಂದ ಕೊನೆವರೆಗೂ ಅನಸೂಯ ಆಹಾರ ಜಗಿಯುವ ಸಮಸ್ಯೆ ಇತ್ತು. ಅಲ್ಲದೆ ಈಗ ಅದಕ್ಕೆ 16 ವರ್ಷ ವಯಸ್ಸಾಗಿತ್ತು. ಹೀಗಾಗಿ ಹುಲಿ ತೀರಿಕೊಂಡಿದೆ ಎಂದು ಮೃಗಾಲಯದ ಸಿಬ್ಬಂದಿ ಹೇಳಿದ್ದಾರೆ.