ಈಜುಕೊಳದಲ್ಲಿ ಮುಳುಗಿ 7 ವರ್ಷದ ಬಾಲಕಿ ಸಾವು !!

ಬೆಂಗಳೂರು: ಈಜುಕೊಳದಲ್ಲಿ ಮುಳುಗಿ 7 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ರಸ್ತೆಯ ಆವಲಹಳ್ಳಿಯ ರಾಮ್ಕಿ ಒನ್ ನಾರ್ತ್ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ.
ಘಟನೆಯಿಂದ ಭಯಭೀತರಾದ ರಾಮ್ಕಿ ಒನ್ ನಾರ್ತ್ ಅಪಾರ್ಟ್ಮೆಂಟ್ ಮಾಲೀಕರ ಸಹಕಾರ ಸಂಘದ ಅಧ್ಯಕ್ಷ ವಿದ್ಯಾಧರ್ ದುರ್ಗೇಕರ್ ಅವರು ಮುಖ್ಯಮಂತ್ರಿ, ಗೃಹ ಸಚಿವರು, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ “ನಿರ್ವಹಣಾ ಸಿಬ್ಬಂದಿಯ ನಿರ್ಲಕ್ಷ್ಯ” ಮತ್ತು “ಅಪಾರ್ಟ್ಮೆಂಟ್ ಸದಸ್ಯರ ಜೀವವನ್ನು ರಕ್ಷಿಸುವಲ್ಲಿ ಕಳಪೆ ನಿರ್ವಹಣೆ” ಬಗ್ಗೆ ದೂರು ನೀಡಿದ್ದಾರೆ.
“ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿಯನ್ನು ಬೇರೆ ಕೆಲಸಕ್ಕೆ ನಿಯೋಜಿಸಲಾಗಿದ್ದು, ಈಜುಕೊಳವನ್ನು ಗಮನಿಸದೆ ಬಿಡಲಾಗಿದೆ. ಬಾಲಕಿ ಈಜಲು ಕೊಳಕ್ಕೆ ಇಳಿದು ಶವವಾಗಿ ಹೊರಬಂದಳು. ಕಾರ್ಡಿಯೋಪಲ್ಮೊನರಿ ರೆಸಸಿಟೇಶನ್ (ಸಿಪಿಆರ್) ನೀಡುವ ವಿಫಲ ಪ್ರಯತ್ನದ ನಂತರ, ದೇಹವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು” ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಿರ್ವಹಣಾ ಸಿಬ್ಬಂದಿಯನ್ನು ಬದಲಾಯಿಸುವಂತೆ ಅಪಾರ್ಟ್ಮೆಂಟ್ ಸಹಕಾರಿ ಸೊಸೈಟಿಯ ಸದಸ್ಯರು ಮಾಡಿದ ಅನೇಕ ವಿನಂತಿಗಳಿಗೆ ಬಿಲ್ಡರ್ ಗಮನ ಹರಿಸಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ದುರ್ಗೇಕರ್ ಅವರು ದೂರು ದಾಖಲಿಸಿದ್ದಾರೆ ಎಂದು ರಾಜಾನುಕುಂಟೆ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ