ಕೂಡಲಸಂಗಮ ಶ್ರೀಗಳ ನೂರಾರು ವಿಷಯ ನನ್ನ ಬಳಿ ಇವೆ: ಮುರುಗೇಶ ನಿರಾಣಿ

ಬಾಗಲಕೋಟೆ: ನಿಮ್ಮ ನೂರಾರು ವಿಷಯ ನನ್ನ ಬಳಿ ಇವೆ. ವೈಯಕ್ತಿಕ ವಿಷಯಕ್ಕೆ ಬಂದರೆ ನಾನು ಸುಮ್ಮನಿರಲ್ಲ. ಸಮಾಜದವರು ಮಾತನಾಡಬಾರದು ಎಂದು ಗೌರವ ಕೊಟ್ಟು ಸುಮ್ಮನಿದ್ದೇನೆ. ಹಾಗಂತ ದೌರ್ಬಲ್ಯ ಅಂದುಕೊಳ್ಳಬೇಡಿ.
ನಿಮ್ಮ ಬಗ್ಗೆ ಮಾತಾಡಲು ನನ್ನ ಬಳಿಯೂ ಸಾಕಷ್ಟು ವಿಷಯ ಇವೆ. ಇದೆಲ್ಲ ಬಿಟ್ಟು, ಸಮಾಜಕ್ಕೆ ಮೀಸಲಾತಿ ಕೊಡಿಸಲು ಗಮನ ಕೊಡಿ ಎಂದು ಮಾಜಿ ಸಚಿವ ಡಾ|ಮುರುಗೇಶ ನಿರಾಣಿ ಕೂಡಲಸಂಗಮ ಶ್ರೀಗೆ ನೇರ ಎಚ್ಚರಿಕೆ ನೀಡಿದ್ದಾರೆ.
ಕಲಾದಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಮಾಜಕ್ಕೆ ಮೀಸಲಾತಿ ಕೊಡಿಸುವ ಕುರಿತು ಗಮನ ಕೊಡಿ. ಯಾವುದೇ ಪಕ್ಷದ ಪರ ಪ್ರಚಾರ ಮಾಡುವುದು ಬಿಡಿ. ಬೆಳಗಾವಿಯಲ್ಲಿ ಜಗದೀಶ ಶೆಟ್ಟರ ಹೊರಗಿನವರು ಎಂದು ಸಚಿವೆ ಲಕ್ಷ್ಮೀ ಅಕ್ಕಾ ಹೇಳುತ್ತಿದ್ದಾರೆ. ವಾಸ್ತವದಲ್ಲಿ ಲಕ್ಷ್ಮೀ ಅವರೇ ಖಾನಾಪುರ ತಾಲೂಕಿನವರು.
ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಬಂದಿದ್ದಾರೆ. ಅಲ್ಲದೇ ಮೃಣಾಲ್ ಹೆಬ್ಟಾಳಕರ ಯಾರು ಎಂಬುದನ್ನು ಹೇಳಲಿ. ಜಗದೀಶ ಶೆಟ್ಟರ ಮತ್ತು ಮೃಣಾಲ್ ಇಬ್ಬರು ಒಂದೇ ಸಮಾಜದವರು. ನೀವೇಕೆ ಅಲ್ಲಿ ಪ್ರಚಾರ ಮಾಡ್ತಿದ್ದೀರಿ. ನಿಮ್ಮ ಸಮಾಜದವರು ಇದ್ದಲ್ಲಿಗೆ ಹೋಗಿ ಪ್ರಚಾರ ಮಾಡಿ. ಆದರೆ, ಸುಳ್ಳು ಹೇಳಿ, ಬೆಂಬಲ ಕೊಡುವುದು ಯಾವ ನ್ಯಾಯ ಎಂದರು.