ಯತ್ನಾಳ್ ಮಾತಿಗೆ ಯಾರೂ ಬೆಲೆಕೊಡಲ್ಲ: ಸಚಿವ ಮುರುಗೇಶ್ ನಿರಾಣಿ

ಬಾಗಲಕೋಟೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮಾತನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳು ವುದಿಲ್ಲ. ಹಾದಿಬೀದಿಯಲ್ಲಿ ಹೋಗೋವವರೆಲ್ಲ ಮಾತನಾಡಿದರೆ ಉತ್ತರ ಕೊಡುವುದಿಲ್ಲ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಪರೋಕ್ಷವಾಗಿ ತಿರುಗೇಟು ನೀಡಿದರು.
ದೀಪ ಆರುವಾಗ ಗಾಳಿಗೆ ಜಾಸ್ತಿ ಉರಿಯುತ್ತದೆ ಎಂದು ಬಿಜೆಪಿ ನೂತನ ಪದಾಕಾರಿಗಳ ಬಗ್ಗೆ ಯತ್ನಾಳ್ ಟೀಕೆ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ಏನು ಮಾತಾಡ್ತಿದ್ದೀನಿ ಎಂದು ಅವರಿಗೆ ಅರ್ಥ ಆಗುತ್ತೋ ಇಲ್ಲವೊ ಗೊತ್ತಿಲ್ಲ. ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ವ್ಯಂಗ್ಯವಾಡಿದರು.
ಇನ್ನು ಆರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದುಹೋಗುತ್ತೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯದ ಜನ ರೊಚ್ಚಿಗೆದ್ದಿದ್ದಾರೆ. ಈ ಸರ್ಕಾರ ಹಿಂದೂಗಳಿಗೆ ತಾರತಮ್ಯ ಮಾಡುತ್ತಿದೆ.ಈ ಸರ್ಕಾರವನ್ನು ಕಿತ್ತೊಗೆಯಲು ಜನ ಎದುರು ನೋಡುತ್ತಿದ್ದಾರೆ. ಈ ಸರ್ಕಾರ ತಾನಾಗೆ ಬಿದ್ದು ಹೋಗುತ್ತೆ. ಈಗಾಗಲೇ ಕಾಂಗ್ರೆಸ್ ಸರ್ಕಾರ ಕೋಮಾದಲ್ಲಿದೆ. ಅದರ ಬಗ್ಗೆ ಮಾತನಾಡಿ ನಾವೇಕೆ ಪಾಪ ಕಟ್ಟಿಕೊಳ್ಳುವ ಕೆಲಸ ಮಾಡಬೇಕು ಎಂದು ಹೇಳಿದರು.