ಶಾಲಾ ಆವರಣದಲ್ಲಿ ಶಿಕ್ಷಕಿ ಕೊರಳಲ್ಲಿ ಹಾವು !!

ಅಮ್ರೋಹಾ: ಶಾಲಾ ಶಿಕ್ಷಕಿಯೊಬ್ಬಳು ಶಾಲೆಗೆ ಹಾವು ತಂದು ಆತಂಕ ಮೂಡಿಸಿದ ಘಟನೆ ನಡೆದಿದೆ. ರೀಲ್ಸ್ ಗೀಳು ಏನು ಬೇಕಾದರೂ ಮಾಡಿಸುತ್ತದೆ ಎಂಬುದಕ್ಕೆ ಉತ್ತರಪ್ರದೇಶದಲ್ಲಿ ನಡೆದಿರುವ ಈ ಘಟನೆಯೊಂದು ತಾಜಾ ಉದಾಹರಣೆಯಾಗಿದೆ.
ಅಮ್ರೋಹಾ ಜಿಲ್ಲೆಯ ಸುಲ್ತಾನ್ ಥೆರ್‌ನ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ನೀಶು ಅವರು ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಿದ್ದಾರೆ.
ತಮ್ಮ ರೀಲ್ಸ್ ಗೆ ಹೆಚ್ಚಿನ ವೀಕ್ಷಣೆ ಹಾಗೂ ಲೈಕ್ಸ್ ಬರಲಿ ಎಂದು ಸುಮಾರು 3-5 ಅಡಿ ಉದ್ದದ ಹಾವು ತಂದು ತನ್ನ ಕುತ್ತಿಗೆಗೆ ಸುತ್ತಿಕೊಂಡಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾಳೆ.
ಶಿಕ್ಷಕಿಯ ಈ ಹುಚ್ಚಾಟಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಹಾಗೂ ಘಟನೆ ಕುರಿತು ಉತ್ತರಿಸುವಂತೆ ಮೇಲಾಧಿಕಾರಿಗಳು ಶಾಲಾ ಮುಖ್ಯ ಶಿಕ್ಷಕರಿಗೆ ನೋಟಿಸ್ ನೀಡಿದ್ದಾರೆ.
ಇನ್ನು ಸೋಷಿಯಲ್ ಮೀಡಿಯಾದಲ್ಲಿನ ರೀಲ್ಸ್ ಗಳಿಗೆ ಹೆಚ್ಚಿನ ವಿವ್ಸ್ ಮತ್ತು ಲೈಕ್ಸ್ ಗಾಗಿ ಅಪಾಯಕಾರಿ ಸ್ಟಂಟ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ಚಲಿಸುತ್ತಿದ್ದ ಬಸ್, ರೈಲಿನಲ್ಲಿ ರೀಲ್ಸ್ ಮಾಡುತ್ತಿದ್ದ ಯುವಕರು ಸಾವನ್ನಪ್ಪಿದ್ದ ಘಟನೆ ಇತ್ತೀಚಿಗಷ್ಟೆ ನಡೆದಿವೆ.