ಕರ್ತವ್ಯನಿರತ ಮಹಿಳಾ ಪಿಡಿಒ ಹೃದಯಾಘಾತ !!
ಪಾಂಡವಪುರ: ಕರ್ತವ್ಯನಿರತ ಮಹಿಳಾ ಪಿಡಿಒ ತಾಪಂ ಕಚೇರಿಯಲ್ಲಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಪಟ್ಟಣದಲ್ಲಿ ಸೋಮವಾರ ನಡೆದಿದೆ.
ಆರ್ಟಿಐ ಕಾರ್ಯ ಕರ್ತರ ಒತ್ತಡದಿಂದಾಗಿ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಹಾಗೂ ಪಿಡಿಒಗಳು ಆರೋಪಿಸಿದ್ದಾರೆ. ಮೈಸೂರಿನ ವಸಂತನಗರ ನಿವಾಸಿ ಭಾರತಿ (54) ಮೃತರು. ಪಾಂಡವಪುರ ತಾಲೂಕಿನ ಗುಮ್ಮನಹಳ್ಳಿ ಗ್ರಾಪಂನಲ್ಲಿ ನಾಲೈದು ತಿಂಗಳಿನಿಂದ ಪಿಡಿಒ ಆಗಿದ್ದರು. ಮಂಡ್ಯ ತಾಲೂಕು ತೂಬಿನಕೆರೆ ಗ್ರಾಪಂನಲ್ಲಿ ಕಾವ್ಯದರ್ಶಿಯಾಗಿದ್ದ ಭಾರತಿ ಇತ್ತೀಚೆಗೆ ಪಿಡಿಒ ಆಗಿ ಬಡ್ತಿ ಪಡೆದಿದ್ದರು. ಮೃತರಿಗೆ ಪತಿ ಪ್ರಕಾಶ್, ಒಬ್ಬ ಪುತ್ರಿ ಇದ್ದಾರೆ.
ಆರ್ಟಿಐ ಕಾರ್ಯಕರ್ತರೊಬ್ಬರು ಗುಮ್ಮನಹಳ್ಳಿ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಪಂನಲ್ಲೂ ಮನರೇಗಾ ಕಾಮಗಾರಿಗಳು ಗುಣಾತ್ಮಕವಾಗಿ ನಡೆದಿಲ್ಲ ಎಂದು ದೂರು ನೀಡಿದ್ದರು. ಈ ವಿಚಾರವಾಗಿ ಚರ್ಚಿಸಲು ಶಾಸಕ ದರ್ಶನ್ ಪುಟ್ಟಣ್ಣಯ್ಯ, ತಾಪಂ ಇಒ ಲೋಕೇಶ್ ಮೂರ್ತಿ, ಪಿಡಿಒ ಭಾರತಿ ಹಾಗೂ ಆರ್ಟಿಐ ಕಾರ್ಯಕರ್ತರನ್ನು ಕಚೇರಿಗೆ ಕರೆದು ಚರ್ಚಿಸಿದ್ದರು ಎನ್ನಲಾಗಿದೆ. ಸಭೆ ಬಳಿಕ ಭಾರತಿ ಅವರಿಗೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದರು, ಮೈಸೂರಿನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.