ಬಿಜೆಪಿಯವ್ರು ಹೇಳಿದ್ರೆ ಕುಮಾರಸ್ವಾಮಿ ಚಡ್ಡಿನೂ ಹಾಕ್ತಾರೆ, ದತ್ತ ಮಾಲೆಯನ್ನೂ ಸಹ ಹಾಕ್ತಾರೆ: ಸಚಿವ ಚಲುವರಾಯಸ್ವಾಮಿ ವಾಗ್ದಾಳಿ
ಮಂಡ್ಯ: ಬಿಜೆಪಿ ಅವರು ಹೇಳಿದರೆ ಕುಮಾರಸ್ವಾಮಿ ಚಡ್ಡಿನೂ ಹಾಕುತ್ತಾರೆ, ದತ್ತ ಮಾಲೆಯನ್ನೂ ಸಹ ಹಾಕಿಕೊಳ್ಳುತ್ತಾರೆ ಎನ್ನುವ ಮೂಲಕ ಕುಮಾರಸ್ವಾಮಿ ವಿರುದ್ಧ ಮತ್ತೆ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿಯ ಹಲಗೂರಿನಲ್ಲಿ ಬರ ಅಧ್ಯಯನ ವೇಳೆ ಮಾತನಾಡಿದ ಅವರು, ಕುಮಾರಸ್ವಾಮಿಗೆ ಈ ರಾಜ್ಯದ ಜವಾಬ್ದಾರಿ ಹಾಗೂ ಜನರ ಸಮಸ್ಯೆ ಮುಖ್ಯ ಅಲ್ಲ. ಕುಮಾರಸ್ವಾಮಿ ಯಾವತ್ತೂ ಜನರ ಸಮಸ್ಯೆ ಬಗ್ಗೆ ಮಾತನಾಡಿಲ್ಲ. ಎರಡು ಮೂರು ತಿಂಗಳಿನಿಂದ ಹಿಡಿತ ಇಲ್ಲದೆ ಮಾತನಾಡುತ್ತಿದ್ದಾರೆ. ಅವರ ರೀತಿ ಮಾತನಾಡುವುದು ಸರಿ ಅಂದರೆ ನಾನು ಅವರಪ್ಪನ ರೀತಿ ಮಾತಾಡುತ್ತೇನೆ ಎಂದು ಹರಿಹಾಯ್ದರು.
ಅವರಿಗೆ ಯಾವ ಸಚಿವರು ಕರೆ ಮಾಡಿದ್ದಾರೆ ಅಂತಾ ದಾಖಲೆ ಬಿಡುಗಡೆ ಮಾಡಲಿ. ಅವರ ಬಳಿ ಪೆನ್‌ಡ್ರೈವ್ ಬಿಡುಗಡೆ ಮಾಡಿ ಅಂತಾ ಹೇಳಿದ್ದೆವು. ಆದರೆ ಈಗ ಮಂತ್ರಿಗಳು ಕರೆ ಮಾಡಿ ಬಿಡುಗಡೆ ಮಾಡಬೇಡಿ ಅಂತಾ ಹೇಳಿದ್ದಾರೆ ಎನ್ನುತ್ತಾರೆ. ಅದ್ಯಾವ ಮಂತ್ರಿ ಅಂತಾ ಹೇಳಲಿ. ಅವರ ಹತ್ತಿರ ಇರೋದು ಪೆನ್‌ಡ್ರೈವ್ ಅಲ್ಲ, ಪೆನ್ಸಿಲ್‌ಡ್ರೈವ್ ಇರೋದು ಅಳಿಸಿ ಹೋಗಿದೆ. ಕುಮಾರಸ್ವಾಮಿ ಉಪಯೋಗಿಸುವ ಭಾಷೆ ಸರಿ ಇದೆಯಾ ಹೇಳಿ? ಮೊನ್ನೆ ಕುಮಾರಸ್ವಾಮಿ ನಾವು ಜಾತ್ಯತೀತ ಅಂದರು. ಮುಸ್ಲಿಂ, ದಲಿತ, ಹಿಂದುಳಿದವರ ಪರ ಅಂದು ಜಾತ್ಯತೀತ ಅಂತಾ ಹೆಸರಿಟ್ಟುಕೊಂಡಿದ್ದರು. ಈಗ ದತ್ತ ಮಾಲೆ ಹಾಕುತ್ತೀನಿ ಎನ್ನುತ್ತಾರೆ. ಯಾವುದನ್ನು ಹಾಕಿಕೊಳ್ಳುತ್ತಾರೋ ಯಾರ ಪರ, ಯಾವ ಸಮಾಜದ ಪರ ನಿಲ್ಲುತ್ತಾರೋ ನಮಗೆ ಗೊತ್ತಿಲ್ಲ ಎಂದರು.
ಕುಮಾರಸ್ವಾಮಿ ಈಗ ಬಿಜೆಪಿ ಏನು ಹೇಳಿದರೂ ಕೇಳುತ್ತಾರೆ. ಚಡ್ಡಿ ಹಾಕಿಕೊಳ್ಳಲು ರೆಡಿ ಇದ್ದಾರೆ, ದತ್ತ ಮಾಲೆ ಹಾಕಿಕೊಳ್ಳಲು ರೆಡಿ ಇದ್ದಾರೆ. ಅದರಿಂದ ನಮಗೆ ಏನು ಬೇಜಾರಿಲ್ಲ. ಅವರು ಚಡ್ಡಿ ಹಾಕಿಕೊಂಡರೂ ಸಂತೋಷ. ದತ್ತ ಮಾಲೆ ಹಾಕಿಕೊಂಡರೂ ಸಂತೋಷ. ಅದು ಅವರ ರಾಜಕಾರಣ, ಅವರು ಮಾಡಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದರು.