ಮಹಾನಗರ ಸಭೆಯ ತಿನಸು ಕಟ್ಟೆ ಮಳಿಗೆಯಲ್ಲಿ ಅಕ್ರಮ !! ತನಿಖೆ ಸುರು.
ಬೆಳಗಾವಿ: ಬಸವೇಶ್ವರ ವೃತ್ತದ ಬಳಿ ಇರುವ ತಿನ್ನಿಸು ಕಟ್ಟೆ ಮಳಿಗೆ ಹಂಚಿಕೆಯಲ್ಲಿ ಅವ್ಯವಹಾರ ಹಾಗೂ ನಾಲಾ ಪಕ್ಕದಲ್ಲೇ ಕಟ್ಟಡ ನಿರ್ಮಾಣ ಸೇರಿದಂತೆ ಸಾಕಷ್ಟು ಭ್ರಷ್ಟಾಚಾರ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ಸೋಮವಾರ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ತಿನ್ನಿಸು ಕಟ್ಟೆಯ ಪ್ರತಿಯೊಂದು ಮಳಿಗೆ ತಪಾಸಣೆ ಮಾಡಿ ಲೋಕೋಪಯೋಗಿ ಇಲಾಖೆ ಬೆಂಗಳೂರು ದಕ್ಷಿಣ ಮುಖ್ಯ ಎಂಜಿನಿಯರ್ ದುರ್ಗಪ್ಪ ನೇತೃತ್ವದ ನಾಲ್ಕು ಜನ ತನಿಖಾ ತಂಡ ಮಾಹಿತಿ ಕಲೆ ಹಾಕಿದರು.
ಬೆಳಗಾವಿ ಬಸವೇಶ್ವರ ನಗರದಲ್ಲಿರುಗ ತಿನ್ನಿಸು ಕಟ್ಟೆಯ ಕಟ್ಟಡವೇ ಅವೈಜ್ಞಾನಿಕವಾಗಿದೆ. ನಾಲೆ ಹರಿಯುವ ಜಾಗದಿಂದ ಇಂತಿಷ್ಟು ಕಿ.ಮೀ ದೂರ ಇರಬೇಕೆಂಬ ನಿಯಮ ಇದ್ದರೂ ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಲೋಕೋಪಯೋಗಿ ಇಲಾಖೆಯಿಂದ ಕಟ್ಟಲ್ಪಟ್ಟಿರುವ ಈ ಕಟ್ಟಡದಲ್ಲಿ ವಿಧವೆಯರು, ಬಡವರು, ದೀನ ದಲಿತರಿಗೆ ತೆರಿಗೆ ಕಟ್ಟದ ಕಡು ಬಡವರಿಗೆ ಕಡಿಮೆ ಬಾಡಿಗೆಯಲ್ಲಿ ಮಳಿಗೆಗಳನ್ನು ಹಂಚಬೇಕು ಎಂಬ ಕಾನೂನು ಇದ್ದರೂ ಇದನ್ನೆಲ್ಲ ಗಾಳಿಗೆ ತೂರಿ ಕೇವಲ ಬಿಜೆಪಿಯ ಕಾರ್ಯಕರ್ತರಿಗೆ ಹಂಚಿಕೆ ಮಾಡಿದ್ದಾರೆ ಎನ್ನುವ ಆರೋಪ ಹಾಗೂ ದೂರಿನ ಮೇರೆಗೆ ಸರಕಾರ ಲೋಕೋಪಯೋಗಿ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಕಮಿಟಿ ರಚನೆ ಮಾಡಿ ತನಿಖೆಗೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಇಲ್ಲಿನ ಪ್ರತಿಯೊಂದು ಮಳಿಗೆಯನ್ನು ತಪಾಸಣೆ ನಡೆಸಿದರು.
ತಿನ್ನಿಸು ಕಟ್ಟೆಯ ಕಟ್ಟಡವನ್ನು ನಿರ್ಮಾಣ ಮಾಡಿದ ಗುತ್ತಿಗೆದಾರನ ಪತ್ನಿಯ ಹೆಸರಿನಲ್ಲಿಯೂ ಮಳಿಗೆ ಇದೆ. ಯಾವ ಆಧಾರದ ಮೇಲೆ ಇವರಿಗೆ ಹಂಚಿಕೆಯಾಗಿದೆ. ಸರಕಾರದಿಂದ ನಿರ್ಮಾಣ ಮಾಡಿರುವ ಈ ಕಟ್ಟಡದಲ್ಲಿ ಸರಕಾರದ ನಾಮಫಲಕ ಇರಬೇಕು. ವೈಯಕ್ತಿಕ ಸ್ಥಳೀಯ ಶಾಸಕ ಅಭಯ ಪಾಟೀಲ ನಾಮಫಲಕ ಇರುವುದನ್ನು ಸಾಮಾಜಿಕ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು.
ಇದರ ಸತ್ಯಾಸತ್ಯತೆ ಹೊರಗೆ ಬರಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಇತ್ತೀಚೆಗೆ ಬೃಹತ್ ಹೋರಾಟ ನಡೆಸಿ ದೂರು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ತನಿಖೆ ನಡೆಸಲು ಬಂದ ತಂಡಕ್ಕೆ ತಿನ್ನಿಸು ಕಟ್ಟೆ ಪ್ರಾರಂಭವಾಗಿ ಇಷ್ಟು ವರ್ಷವಾದರೂ ನನ್ನ ಹೆಸರಿನಲ್ಲಿ ಮಳಿಗೆ ಇದೆ. ಆದರೆ ಇದೇ ನನ್ನ ಮಳಿಗೆ ಎಂದು ತಿಳಿದಿಲ್ಲ. ಹೆಸರು ನನ್ನ ಪತ್ನಿಯ ಹೆಸರಿನಲ್ಲಿದೆ. ಆದರೆ ಇದನ್ನು ಬೇರೆಯವರಿಗೆ ನೀಡಿದ್ದಾರೆ ಎಂದು ದೂರಿದರು.
ತನಿಖೆಗೆ ಆಗಮಿಸಿದ ಅಧಿಕಾರಿಗಳ ಎದುರು ಉಭಯ ನಾಯಕರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು. ಅಧಿಕಾರಿಗಳು ತನಿಖೆ ನಡೆಸುತ್ತಾರೆ ನೀವು ಯಾಕೆ ಇಲ್ಲಿ ಬಂದಿರಿ? ಎಂದು ಸಚಿವ ಸತೀಶ್ ಜಾರಕಿಹೊಳಿ ಬೆಂಬಲಿಗರಿಗೆ ಅಭಯ್ ಪಾಟೀಲ್ ಬೆಂಬಲಿಗರು ಪ್ರಶ್ನಿಸಿದ್ದಾರೆ. ಇದರಿಂದ ಇಬ್ಬರು ನಾಯಕರ ಬೆಂಬಲಿಗರ ನಡುವೆ ಗಲಾಟೆ, ವಾಗ್ವಾದ ನಡೆಯಿತು. ಇದನ್ನು ಕಂಡ ಪೊಲೀಸರು ಇಬ್ಬರು ಬೆಂಬಲಿಗರನ್ನು ಹೊರ ಕಳುಹಿಸಿದರು.